ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಿಕ್ಷಾ ನಿಲ್ದಾಣ ತೆರವು ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಡ ರಿಕ್ಷಾ ಚಾಲಕರು ತಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ನಿಲ್ದಾಣವನ್ನು ತೆರವು ಮಾಡದಂತೆ ಮನವಿ ಮಾಡಿದ್ದಾರೆ.
ಹೌದು ಕೋಟೇಶ್ವರದ ಕೋಟಿ ಲಿಂಗೇಶ್ವರ ದೇವಸ್ಥಾನದ ಸ್ವಾಧೀನದಲ್ಲಿರುವ ಜಾಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ರಿಕ್ಷಾ ಚಾಲಕರು ಸಾರ್ವಜನಿಕ ಸೇವೆ ನೀಡುತ್ತಾ ಜೀವನ ಸಾಗಿಸುತ್ತಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ, ಕಟ್ಟಡದ ಎದುರು ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವ ಸಂಬಂಧ ಕಟ್ಟಡದ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬೆಳವಣಿಗೆಯಿಂದ ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ದುಡಿಯುತ್ತಿರುವ ರಿಕ್ಷಾ ಚಾಲಕರಲ್ಲಿ ಆತಂಕ ಮನೆಮಾಡಿದೆ.
ರಿಕ್ಷಾ ಚಾಲಕರ ಹೇಳಿಕೆಯ ಪ್ರಕಾರ, ಜಾಗಕ್ಕೆ ಸಂಬಂಧಿಸಿದ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಅಧ್ಯಕ್ಷರಿಂದ ಯಾವುದೇ ತೊಂದರೆ ಎದುರಾಗಿಲ್ಲ. ಆದರೆ ಖಾಸಗಿ ವ್ಯಕ್ತಿಯೊಬ್ಬರ ಒತ್ತಡದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ಕುರಿತು ತಮಗೆ ಸಮರ್ಪಕ ಮಾಹಿತಿ ಇಲ್ಲ. ತಮ್ಮ ಪರವಾಗಿ ಯಾವುದೇ ರೀತಿಯ ವಾದ ಮಂಡಿಸಲು ಅವಕಾಶವೂ ಸಾಧ್ಯವಿಲ್ಲ ಎಂದು ಬಡ ರಿಕ್ಷಾ ಚಾಲಕರು ಮಾಧ್ಯಮದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಲವತ್ತು ವರ್ಷಗಳಿಂದ ಜೀವನೋಪಾಯದ ಕೇಂದ್ರವಾಗಿರುವ ರಿಕ್ಷಾ ನಿಲ್ದಾಣವನ್ನು ತೆರವು ಮಾಡದೆ ಉಳಿಸಿಕೊಡಬೇಕು ಹಾಗೂ ತಮ್ಮ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಬಾರದು ಎಂದು ರಿಕ್ಷಾ ಚಾಲಕರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ದೇವಸ್ಥಾನದ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಬಡ ರಿಕ್ಷಾ ಚಾಲಕರು ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದು, ಕೂಡಲೇ ಕರವೇ ಕುಂದಾಪುರ ಅಧ್ಯಕ್ಷ ಶಿವ ಆರ್. ಪೂಜಾರಿ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಚಾಲಕರ ಧೈರ್ಯ ತುಂಬುವ ಕೆಲಸ ಮಾಡಿದ್ದು, ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರವಾಗಿದೆ.




