ಉಡುಪಿ : ದೇಶದಲ್ಲಿ “ಝಾಂಬಿ ಡ್ರಗ್” ಬಳಕೆ ಇದೆ ಎಂಬ ವದಂತಿಗಳಿಗೆ ಮರುಳು ಆಗಬಾರದು ಎಂದು ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಒಂದು ವಿಡಿಯೋದಲ್ಲಿ ಯುವಕನೊಬ್ಬ “ಝಾಂಬಿ ಡ್ರಗ್” ಸೇವಿಸಿದಂತೆ ವರ್ತಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಈ ಕುರಿತು ಗೃಹ ಸಚಿವರೂ ಸಹ ಸ್ಪಷ್ಟನೆ ನೀಡಿ, ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಯುವಕನನ್ನು ಬಂಧಿಸಿರುವುದೂ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಾ. ಭಂಡಾರಿ, “ಝಾಂಬಿ ಡ್ರಗ್” ಎಂದು ಕರೆಯಲ್ಪಡುವ ಈ ಪದಾರ್ಥವು ಅಮೆರಿಕದಲ್ಲಿ 2016ರಲ್ಲಿ ವರದಿಯಾಗಿದ್ದು, ಮೂಲತಃ ಪ್ರಾಣಿಗಳಿಗೆ ಅರಿವಳಿಕೆ ನೀಡಲು ಬಳಸುವ ವೆಟರ್ನರಿ ಔಷಧವಾಗಿದೆ. ಮನುಷ್ಯರು ಬಳಸಿದರೆ ಚರ್ಮದಲ್ಲಿ ಗಾಯಗಳು, ಹಾಗೂ ಪ್ರತಿಮೆಯಂತೆ ನಿಂತುಕೊಳ್ಳುವಂತಹ ಅಸಹಜ ವರ್ತನೆಗಳು ಕಾಣಿಸಬಹುದು. ಆದರೆ ಭಾರತದಲ್ಲಿ ಇದರ ಬಳಕೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮತ್ತು ಚಂಡೀಗಢದಲ್ಲಿ ವೈರಲ್ ಆದ 30 ಸೆಕೆಂಡ್ ವಿಡಿಯೋ ಆಧರಿಸಿ ತಪ್ಪು ನಿರ್ಧಾರಕ್ಕೆ ಬರಬಾರದು. ಬಿಸಿಲಿನ ತೀವ್ರತೆ, ಹೈಪೋಗ್ಲಿಸೀಮಿಯಾ (ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುವುದು) ಸೇರಿದಂತೆ ಅನೇಕ ಕಾರಣಗಳಿಂದಲೂ ಈ ರೀತಿಯ ವರ್ತನೆ ಕಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇಂತಹ ಸಂದರ್ಭಗಳಲ್ಲಿ ವಿಡಿಯೋ ಮಾಡುವ ಬದಲು, ತಕ್ಷಣವೇ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಅದೇ ವೇಳೆ, “ನಮ್ಮಲ್ಲಿ ‘ಝಾಂಬಿ ಡ್ರಗ್’ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಬದಲಾಗಿ ಗಾಂಜಾ, ಅಫೀಮು, ನಿದ್ರೆ ಮಾತ್ರೆಗಳು, ಎಂಡಿಎಂಎ (MDMA) ಸೇರಿದಂತೆ ದೇಶದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮಾದಕ ದ್ರವ್ಯಗಳ ವಿರುದ್ಧ ಹೆಚ್ಚು ಎಚ್ಚರ ವಹಿಸಬೇಕು. ಇವು ಯುವಜನತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ,” ಎಂದು ಅವರು ಎಚ್ಚರಿಸಿದ್ದಾರೆ.





