ಉಡುಪಿ : ತೆಂಕಪೇಟೆ ಸಮೀಪ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಹೊಂಡಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸಿಕೊಂಡಿದ್ದು, ನಗರಸಭೆ ರಸ್ತೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದೆ.
ನಗರಸಭೆಯ ಒಳಚರಂಡಿ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದ ಕಾರಣ ಕಳೆದ ಹಲವು ದಿನಗಳಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಹೊಂಡದಿಂದಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ಸ್ಥಳೀಯರು ಮತ್ತು ಸಾರ್ವಜನಿಕರು ಹಲವು ಬಾರಿ ನಗರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ವಾಹನ ಸವಾರರ ಸಂಕಷ್ಟವನ್ನು ಮನಗಂಡ ಸಂಚಾರಿ ಠಾಣೆ ಪೊಲೀಸರು ಸ್ವಪ್ರೇರಣೆಯಿಂದ ತಾತ್ಕಾಲಿಕವಾಗಿ ಹೊಂಡವನ್ನು ಮುಚ್ಚಿ ಸಂಚಾರ ಸುಗಮಗೊಳಿಸುವ ಪ್ರಯತ್ನ ನಡೆಸಿದ್ದರು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ತಡವಾಗಿ ಎಚ್ಚೆತ್ತುಕೊಂಡಿರುವ ನಗರಸಭೆಯು ಸೋಮವಾರ ಬೆಳಗ್ಗೆ ಕಾರ್ಮಿಕರ ಮೂಲಕ ರಸ್ತೆ ಹೊಂಡವನ್ನು ಶಾಶ್ವತವಾಗಿ ಮುಚ್ಚುವ ಕಾಮಗಾರಿಯನ್ನು ಆರಂಭಿಸಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆ ಇದೆ.




