Home Crime ತಾಯಿ, ಅಜ್ಜಿ, ಮಾವನನ್ನು ಕೊಂದು ಯುವಕ ಆತ್ಮಹತ್ಯೆ..!!

ತಾಯಿ, ಅಜ್ಜಿ, ಮಾವನನ್ನು ಕೊಂದು ಯುವಕ ಆತ್ಮಹತ್ಯೆ..!!

ಬೆಂಗಳೂರು : ತಾಯಿ, ಅಜ್ಜಿ ಹಾಗೂ ಮಾವನನ್ನು ಕೊಂದ ನಂತರ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ತನ್ನ ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಮತ್ತು ಮಾವ ಸತೀಶ ಅವರನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ.

ಕೃತ್ಯ ಎಸಗಿದ ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳಮ್ಮ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನಂಜಮ್ಮ ಪೌರಕಾರ್ಮಿಕರಾಗಿದ್ದರು. ಮಾವ ಸತೀಶ್ ಪ್ಲಂಬರ್ ಕೆಲಸ ಮಾಡುತ್ತಿದ್ದರು. ಕುಟುಂಬಸ್ಥರೆಲ್ಲರೂ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಪ್ರಶಾಂತ್ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗಿರಲಿಲ್ಲ. ಶನಿವಾರ ತಂದೆ ಕೆಲಸಕ್ಕೆ ಹೋಗಿದ್ದಾಗ ಪ್ರಶಾಂತ್ ಮೂವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಮನೆ ಮಾಲಕರು ಹಾಗೂ ಸ್ಥಳೀಯರು ಆರೋಪಿಯನ್ನು ಹಿಡಿದು ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾಮಾಕ್ಷಿ ಪಾಳ್ಯ ಠಾಣೆ ಪೋಲಿಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.