Home Crime ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಂದ ಚಿಕ್ಕಪ್ಪನಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ…!!

ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಂದ ಚಿಕ್ಕಪ್ಪನಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ…!!

ಲಕ್ನೋ : ತನ್ನ ಅಣ್ಣನ ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಂದ 24 ವರ್ಷದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಶುಕ್ರವಾರ ಮರಣದಂಡನೆ ವಿಧಿಸಿದೆ.

ಮಗುವಿನ ತಾಯಿಯು ಆರೋಪಿಯ ವಿವಾಹ ಪ್ರಸ್ತಾವವನ್ನು ತಿರಸ್ಕರಿಸಿದ ಕಾರಣಕ್ಕೆ ರೊಚ್ಚಿಗೆದ್ದ ಆರೋಪಿಯು ಈ ಭೀಕರ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಾಬು ಸಾರಂಗ್ ಗುರುವಾರ ಈ ಪ್ರಕರಣದಲ್ಲಿ ಆರೋಪಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್‌ನನ್ನು ದೋಷಿ ಎಂದು ಘೋಷಿಸಿದ್ದರು.

ಅದರ ಮರುದಿನವೇ ಆತನಿಗೆ ಮರಣದಂಡನೆ ಮತ್ತು 50,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಣ್ಣನ ಹೆಂಡತಿ ರತಿ ಆರೋಪಿಯ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆತ ಮೇ 30ರಂದು ಶಿಕೋಹಾಬಾದ್‌ನ ಯಾದವ್ ಕಾಲೋನಿಯ ಗಲ್ಲಿಯೊಂದರಲ್ಲಿ ಮಗು ಆರವ್‌ನನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಕೊಂದನು ಎಂದು ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಗೇ ಹೇಳಿದ್ದಾರೆ.

ಬಳಿಕ ಆರೋಪಿಯು ಮಗುವಿನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದನು. ಆತನನ್ನು ಅಂದೇ ಬಂಧಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ತಾನು ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾಗಲು ಬಯಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದನು. ಇದಕ್ಕೆ ಅವರ ಮಗು ಅಡ್ಡಿಯಾಗಿದ್ದಾನೆಂದು ಭಾವಿಸಿ ಈ ಕೃತ್ಯ ಎಸಗಿದ್ದಾಗಿ ಆತ ಹೇಳಿದ್ದನು.

‘‘ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಮಾತ್ರ ಸಮಾಜದಲ್ಲಿ ಸೃಷ್ಟಿಯಾಗಿರುವ ಭಯವನ್ನು ಹೋಗಲಾಡಿಸಲು ಸಾಧ್ಯ. ಇಲ್ಲದಿದ್ದರೆ, ಇಂತಹ ಭೀಕರ ಕೊಲೆಗೂ ಸಾಮಾನ್ಯ ಶಿಕ್ಷೆಯೇ ಸಿಗುತ್ತದೆ ಎಂಬ ಭಯದಲ್ಲೇ ಸಮಾಜ ಬದುಕಬೇಕಾಗುತ್ತದೆ’’ ಎಂದು ನ್ಯಾಯಾ. ಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.