ಹೆಬ್ರಿ, ಜೂ. 29: ಹೆಬ್ರಿ ಪೊಲೀಸ್ ಠಾಣೆಗೆ ಅರ್ಜಿ ವಿಚಾರಣೆಗೆ ಬಂದಿದ್ದ 74 ವರ್ಷದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟಿದ್ದು, ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಶಿವಪುರ ಗ್ರಾಮದ ರಮೇಶ್ ನಾಯ್ಕ್ (46) ಅವರ ತಾಯಿ ಸುಶೀಲಾ (74) ಅವರು ಜೂನ್ 28ರಂದು ತಮ್ಮ ಇಬ್ಬರು ಮಕ್ಕಳು ಹಾಗೂ ಸೊಸೆಯೊಂದಿಗೆ ಅರ್ಜಿ ವಿಚಾರಣೆಗೆ ಹೆಬ್ರಿ ಪೊಲೀಸ್ ಠಾಣೆಗೆ ಬಂದಿದ್ದರು. ಬೆಳಿಗ್ಗೆ ಸುಮಾರು 11:55ರ ವೇಳೆಗೆ ಅವರು ಏಕಾಏಕಿ ಅಸ್ವಸ್ಥಗೊಂಡರು.
ತಕ್ಷಣ ಕುಟುಂಬದವರು ಅವರನ್ನು ಹೆಬ್ರಿಯ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ, ಸುಶೀಲಾ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರಮೇಶ್ ನಾಯ್ಕ್ ನೀಡಿದ ದೂರಿನಂತೆ, ಸುಶೀಲಾ ಅವರ ಸಾವಿಗೆ ಲಕ್ಷೀ ಹಾಗೂ ಪ್ರತಿಮಾ ಅವರ ಕಿರುಕುಳ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 17/2026 ದಾಖಲಿಸಿಕೊಂಡು, ಬಿಎನ್‌ಎಸ್‌ಎಸ್ ಕಲಂ 194(3)(iv) ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.




