ಉಡುಪಿ : ರಾಜ್ಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ ಪಂಚ ಗ್ಯಾರಂಟಿಯನ್ನು ಜಾರಿಗೊಳಿಸಿ ಜನಮನ್ನಣೆ ಗಳಿಸಿದೆ. ಗ್ಯಾರಂಟಿ ಯೋಜನೆಯೊಂದಿಗೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಸಂತುಷ್ಠರಾಗಿದ್ದಾರೆ. ರಾಜ್ಯವು ತಲಾ ವರಮಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ, ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಕುಡಿತದ ಚಟದಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬ ಸಂಕಷ್ಟದಲ್ಲಿದೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ದುಡಿಯುವ ವರ್ಗ ಮತ್ತು ಕೆಲ ವಿದ್ಯಾರ್ಥಿಗಳು ಮದ್ಯದ ಚಟಕ್ಕೆ ತುತ್ತಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯ ನಿಷೇಧದಿಂದ ರಾಜ್ಯದಲ್ಲಿ ಮಹಿಳೆಯರು, ಬಡ ವರ್ಗದವರು ಸಂತೋಷಗೊಳ್ಳುವರು ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ. ಬಿಹಾರದಲ್ಲಿ ಕೇವಲ 10 ಸಾವಿರ ರೂಪಾಯಿ ಖಾತೆಗೆ ಪಾವತಿಯಿಂದ ನಿತೀಶ್ ಕುಮಾರ್ ಸರಕಾರ ಮತ್ತೆ ಅಧಿಕಾರಕ್ಕೆ ಬಂದಿದೆ ಎನ್ನುವ ಬದಲು ಮದ್ಯ ನಿಷೇಧದಿಂದ ಜನರು ಮಹಿಳೆಯರು ಸಂತಸಗೊಂಡಿದ್ದಾರೆ. ಆ ಸರಕಾರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ರಾಜ್ಯದಲ್ಲೂ ಮದ್ಯ ನಿಷೇಧವಾಗಬೇಕೆಂದು ಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಬಜೆಟ್ ನಲ್ಲಿ ಘೋಷಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಮುಂದಿನ ಬಜೆಟ್ ಮಂಡಿಸುವಾಗ ಮದ್ಯ ನಿಷೇಧ ಘೋಷಿಸಬೇಕು. ಇದರಿಂದ ಅತಂತ್ರರಾಗುವ ಅಬಕಾರಿ ಇಲಾಖೆ, ಮದ್ಯಮಾರಾಟ ಮಂಡಳಿಯ ನೌಕರರಿಗೆ ಬೇರೆ ಉದ್ಯೋಗದ ವ್ಯವಸ್ಥೆಯನ್ನು ಸರಕಾರವೇ ಕಲ್ಪಿಸಬೇಕೆಂದು ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.



