ಬೆಂಗಳೂರು: ನಗರದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕಡ್ಡಾಯ (ಡಿಫಾಲ್ಟ್ ) ಜಾಮೀನು ಕೋರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಕಿರಣ್ (ಆರೋಪಿ – 2), ವಿಮಲ್ ರಾಜ್ (ಎ – 3), ಪ್ರದೀಪ್ (ಎ – 6) ಮತ್ತು ಆರ್. ಮದನ್ (ಎ – 7) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರಿದ್ದ ಪೀಠ ಪ್ರಕಟಿಸಿದೆ. ಆದೇಶದ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ದಾಖಲಾಗಿ 90 ದಿನ ಕಳೆದಿದ್ದರೂ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ಇದರಿಂದ ಜಾಮೀನು ನೀಡಬೇಕು. ಪ್ರಕರಣದಲ್ಲಿ ಕೋಕಾ ಕಾಯಿದೆಯ ನಿಯಮಗಳನ್ನು ಅನ್ವಯಿಸಿ ಆರೋಪಪಟ್ಟಿ ಸಮಯ ವಿಸ್ತರಿಸಿರುವ ಕ್ರಮ ಕೂಡ ಸರಿಯಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಮತ್ತು ಡಿಫಾಲ್ಟ್ ಜಾಮೀನು ನೀಡಬೇಕು,” ಎಂದು ಕೋರಿದ್ದರು.
ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆಯಾಗಿತ್ತು. ಈ ಸಂಬಂಧ ಭಾರತಿನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿ ಪೊಲೀಸರಿಗೆ ವಹಿಸಿದೆ. ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ. ಉಳಿದಂತೆ ಈ ಅರ್ಜಿದಾರರು ಆರೋಪಿಗಳಾಗಿದ್ದಾರೆ.
ಈ ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರ ಆರೋಪಿಗಳನ್ನು ಬಂಧಿಸಿದ್ದರು. ಡಿಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನಗರದ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು 2025ರ ಅ.17ರಂದು ಆದೇಶಿಸಿತ್ತು. ಹಾಗಾಗಿ, ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು ಎಂದು ತಿಳಿಯಲಾಗಿದೆ.



