ಉಡುಪಿ : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.
ಶನಿವಾರ ಬೆಳಿಗ್ಗೆ ಹಿರಿಯಡ್ಕದ ಜಿಲ್ಲಾ ಕಾರಾಗೃಹದಿಂದ ಬಿಗಿ ಭದ್ರತೆಯಲ್ಲಿ ತಿಮರೋಡಿಯನ್ನು ಕರೆತರಲಾಗಿತ್ತು. ನ್ಯಾಯಾಧೀಶರು ವಿಚಾರಣೆಯನ್ನು ಅಪರಾಹ್ನ 3 ಗಂಟೆಗೆ ಮುಂದೂಡಿದ್ದರು.
ಬ್ರಹ್ಮಾವರ ಪೊಲೀಸರು ತಮ್ಮ ಸುಪರ್ದಿಗೊಪ್ಪಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸುಮಾರು 2 ಗಂಟೆಗಳ ಪೊಲೀಸ್ ಕಸ್ಟಡಿ ಬಳಿಕ ಸಂಜೆ 4 ಗಂಟೆಗೆ ಉಡುಪಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಆರೋಪಿ ಪರ ವಕೀಲ ವಿಜಯ ವಾಸು ಪೂಜಾರಿ ಹಾಗೂ ಸಹಾಯಕ ಸರಕಾರಿ ಅಭಿಯೋಜಕರ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ನಾಗೇಶ್ ಎನ್.ಎ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದರು.