Home Crime ಸರಣಿ ಕಳ್ಳತನ : ಕುಖ್ಯಾತ ಆರೋಪಿ ಸೆರೆ…!!

ಸರಣಿ ಕಳ್ಳತನ : ಕುಖ್ಯಾತ ಆರೋಪಿ ಸೆರೆ…!!

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಸಂಬಂಧ ತಮಿಳುನಾಡಿನ ಕೊಯಂಬತ್ತೂರು ಮೂಲದ ಕುಖ್ಯಾತ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತನಿಂದ ಕಳ್ಳತನಕ್ಕೆ ಬಳಸುತ್ತಿದ್ದ ಉಪಕರಣಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿವಾಸಿ ತಮಿಳುನಾಡಿನ ಕೊಯಂಬತ್ತೂರು ಜಯಕುಮಾರ್ ವಿ. (55) ಬಂಧಿತ ಆರೋಪಿ.

ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳ ತನಿಖೆ ವೇಳೆ ಆರೋಪಿಯ ಸುಳಿವು ಪತ್ತೆಯಾಗಿದ್ದು, ಜುಲೈ 8ರಂದು ಬಂಧಿಸಲಾಗಿದೆ. ಬಂಧಿತನ ಬಳಿಯಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಕಬ್ಬಿಣದ ಸಲಾಕೆ, ಸ್ಕೂಡೈವರ್, ಬ್ಯಾಗ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಬೆಳ್ತಂಗಡಿ, ಉಪ್ಪಿನಂಗಡಿ, ಸುರತ್ಕಲ್ ಠಾಣೆಯ 5 ಪ್ರಕರಣಗಳಷ್ಟೇ ಅಲ್ಲದೆ, ಕೇರಳ ರಾಜ್ಯದ ನಾಲ್ಕು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಹಾಗೂ ಬೆಂಗಳೂರಿನ ಒಂದು ಪ್ರಕರಣ ಸೇರಿದಂತೆ ಒಟ್ಟು 11 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಎಲ್ಲ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಬೆಳ್ತಂಗಡಿ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಠಾಣೆಯ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ನಡೆದ ತನಿಖಾ ತಂಡದಲ್ಲಿ ಬೆಳ್ತಂಗಡಿ ಠಾಣೆಯ ಪಿಎಸ್‌ಐ ಆನಂದ ಎಂ., ಪಿಎಸ್‌ಐ ಸಿಖಂದರ್ ಪಾಷಾ, ಉಪ್ಪಿನಂಗಡಿ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ., ಬೆಳ್ತಂಗಡಿ ಠಾಣೆಯ ಅಪರಾಧ ದಳದ ಸಿಬ್ಬಂದಿ ಎಚ್ ಸಿ ಪಂಪಾಪತಿ, ಪಿಸಿ ಗಿರೀಶ್, ಸಿಪಿಸಿ ಹೇಮರಾಜ್, ಉಪ್ಪಿನಂಗಡಿ ಠಾಣೆಯ ಪಿಸಿ ಹರ್ಷಿತ್, ಕಡಬ ಠಾಣೆಯ ಎಚ್‌ಸಿ ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.