ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರರ ಪ್ರದೇಶದಲ್ಲಿ ಉಂಟಾದ ಸರಕಾರಿ ಜಾಗ ವಿವಾದದಿಂದ ಸ್ಥಳೀಯ ನೈಜ ಮೀನುಗಾರರಲ್ಲಿ ಉಂಟಾಗಿರುವ ಆತಂಕ ನಿವಾರಣೆ, ಅವರ ಹಕ್ಕು-ಹಿತಗಳ ರಕ್ಷಣೆ ಹಾಗೂ ಸರ್ಕಾರ ಹೊರಡಿಸಿದ ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧಿಕಾರಿ ಮತ್ತು ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಶ್ವಾಸ್ ವಿ. ಅಮೀನ್, ಮಲ್ಪೆ ಪರಿಸರದಲ್ಲಿ ದಶಕಗಳಿಂದ ಮೀನುಗಾರರು ಬಳಸಿಕೊಂಡಿರುವ ಸರಕಾರಿ ಮೀನುಗಾರಿಕಾ ಜಾಗವನ್ನು ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್‌ಗೆ ಮಂಜೂರು ಮಾಡಿದ ಸರ್ಕಾರದ ಇತ್ತೀಚಿನ ಆದೇಶದಿಂದ ಸ್ಥಳೀಯ ಮೀನುಗಾರರಲ್ಲಿ ಭಾರೀ ಆತಂಕ, ಅಸಮಾಧಾನ ಮತ್ತು ಆಕ್ರೋಶ ಉಂಟಾಗಿದೆ ಎಂದು ತಿಳಿಸಿದರು. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರ ನಡುವೆ ಅನಗತ್ಯ ಉದ್ವಿಗ್ನತೆ ಮತ್ತು ವೈಮನಸ್ಯದ ಪರಿಸ್ಥಿತಿಯನ್ನೂ ಸೃಷ್ಟಿಸಿದೆ ಎಂದು ಅವರು ಹೇಳಿದರು.
ಸ್ಥಳೀಯ ನೈಜ ಮೀನುಗಾರರ ದೀರ್ಘಕಾಲದ ಬಳಸುವ ಹಕ್ಕನ್ನು ಪರಿಗಣಿಸದೇ ತೆಗೆದುಕೊಂಡ ಈ ತೀರ್ಮಾನವು ಭವಿಷ್ಯದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಬಹುದು. ಮೀನುಗಾರರ ಜೀವನೋಪಾಯಕ್ಕೆ ಯಾವುದೇ ಬಗೆಯ ತೊಂದರೆ ಆಗದಂತೆ ಅವರ ಹಕ್ಕುಗಳನ್ನು ಕಾಪಾಡಬೇಕು ಎನ್ನುವ ವಿಶ್ವಾಸ ನಮ್ಮದು ಎಂದು ಹೇಳಿದರು.
ಮನವಿಯಲ್ಲಿ ವಿವಾದಾತ್ಮಕ ಆದೇಶವನ್ನು ತಕ್ಷಣವೇ ರದ್ದುಗೊಳಿಸುವ ಜೊತೆಗೆ, ಗಲಭೆಗೆ ಕಾರಣವಾಗುವ ಅಥವಾ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವ ಅಂಶಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಮಲ್ಪೆ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಲಾಗಿದೆ.
ಈ ಮನವಿಯ ಪ್ರತಿಯನ್ನು ಮಾನ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ್ ಭಂಡಾರಿ ಮತ್ತು ಮಾಜಿ ಸಂಸದ ಶ್ರೀ ಜಯಪ್ರಕಾಶ್ ಹೆಗ್ಡೆ ರವರಿಗೆ ಕೂಡ ತಲುಪಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮೀನುಗಾರ ಮುಖಂಡರು ಕೇಶವ ಕೋಟ್ಯಾನ್, ಕಾಪು ಬ್ಲಾಕ್ ಮೀನುಗಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸದಾನಂದ್ ಪೊಲಿಪು, ಗಿರೀಶ್ ಸುವರ್ಣ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ರೋಷನ್ ಶೆಟ್ಟಿ, ಜಿಲ್ಲಾ ಮೀನುಗಾರರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಸಂತೋಷ್ ಪಡುಬಿದ್ರಿ, ಉಪೇಂದ್ರ ಮೆಂಡನ್, ವಿಜಯ್ ಪುತ್ರನ್, ಸುರೇಶ್ ಹೆಬ್ರಿ, ಗಣೇಶ್ ದೊಡ್ಡನಗುಡ್ಡೆ, ಸೂರಜ್ ಕಲ್ಮಾಡಿ, ಅಬೂಬಕರ್, ನಸ್ರುಲ್ ಹೂಡೆ, ಪುಷ್ಪರಾಜ್, ರಕ್ಷಿತ್ ಸಾಲ್ಯಾನ್ ಮಲ್ಪೆ, ದಿನೇಶ್, ಸುಧಾಕರ್ ಕೆ, ದೀಪಕ್ ಪೂಜಾರಿ, ಸುಧಾಕರ್, ಆದಿತ್ಯ ಹಾಗೂ ಹಲವಾರು ಮೀನುಗಾರ ಮುಖಂಡರು ಉಪಸ್ಥಿತರಿದ್ದರು.





