Home Crime ರಸ್ತೆ ಕಾಮಗಾರಿ ವಿವಾದ : ದಂಪತಿ ಮೇಲೆ ಹಲ್ಲೆ ಆರೋಪ, ಇಬ್ಬರ ವಿರುದ್ಧ ಪ್ರಕರಣ…!!

ರಸ್ತೆ ಕಾಮಗಾರಿ ವಿವಾದ : ದಂಪತಿ ಮೇಲೆ ಹಲ್ಲೆ ಆರೋಪ, ಇಬ್ಬರ ವಿರುದ್ಧ ಪ್ರಕರಣ…!!

ಕೊಲ್ಲೂರು: ಪಂಚಾಯತ್ ರಸ್ತೆಯಲ್ಲಿ ಪೈಪ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿ ಮಹಿಳೆ ಹಾಗೂ ಅವರ ಪತಿಗೆ ಗಾಯಗಳಾದ ಘಟನೆ ಕೊಲ್ಲೂರು ಗ್ರಾಮದಲ್ಲಿ ನಡೆದಿದೆ.

ಸಲಗೇರಿ ನಿವಾಸಿ ಉಷಾ (55) ಅವರು ನೀಡಿದ ದೂರಿನ ಪ್ರಕಾರ, ಜೂನ್ 2ರಂದು ಸಂಜೆ ಸುಮಾರು 5:30 ಗಂಟೆಗೆ ಅವರ ಮನೆಯ ಎದುರಿನ ಪಂಚಾಯತ್ ರಸ್ತೆಯನ್ನು ಅಗೆದು ಪೈಪ್ ಅಳವಡಿಸುವ ಕಾರ್ಯವನ್ನು ಉದಯ್ ಆಚಾರ್ ಹಾಗೂ ಮಂಜುಳಾ ನಡೆಸುತ್ತಿದ್ದರು. ಇದಕ್ಕೆ ಉಷಾ ಅವರ ಪತಿ ಉದಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಉದಯ್ ಆಚಾರ್ ಅವರು ಮರದ ಕೋಲಿನಿಂದ ಉದಯಪ್ಪ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಉಷಾ ಅವರು ಮನೆಯೊಳಗೆ ಹೋದಾಗ ಆರೋಪಿಗಳು ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ಕೋಲಿನಿಂದ ಹಲ್ಲೆ ನಡೆಸಿದಲ್ಲದೆ ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ಉಷಾ ಅವರು ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸಂಬಂಧ ಕೊಲ್ಲೂರು ಪೊಲೀಸ್  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.