ಉಡುಪಿ : ಕಳೆದ ಒಂದು ವಾರದಲ್ಲಿ ಉಡುಪಿಯ ನ್ಯಾಯಾಲಯಗಳಿಗೆ ನಕಲಿ ಬಾಂಬ್ ಬೆದರಿಕೆಯ ಇಮೇಲ್ಗಳು ಬಂದಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಹಿಂಭಾಗದ ದ್ವಾರವನ್ನು ಮುಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೊಂದಿಗೆ ಚರ್ಚಿಸಿ ಭದ್ರತೆಯನ್ನು ಬಲಪಡಿಸಲಾಗಿದೆ. ಪ್ರತಿದಿನ ಮುಂಜಾನೆ ಕೋರ್ಟ್ ಕಲಾಪಗಳು ಆರಂಭವಾಗುವುದಕ್ಕಿಂತ ಮುಂಚಿತವಾಗಿ ‘ಆಂಟಿ-ಸಬೋಟೇಜ್ ಚೆಕ್’ ತಂಡವು ಇಡೀ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಸ್ಕ್ರೀನಿಂಗ್ ಮಾಡಲಿದೆ. ಯಾವುದೇ ಶಂಕಾಸ್ಪದ ವಸ್ತುಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಲಯಕ್ಕೆ ಇದ್ದ ನಾಲ್ಕು ಪ್ರವೇಶ ದ್ವಾರಗಳ ಪೈಕಿ, ನ್ಯಾಯಾಧೀಶರು ಹಾಗೂ ಸ್ಥಳಿಯ ವಕೀಲರೊಂದಿಗೆ ಸಮಾಲೋಚಿಸಿ ಹಿಂಭಾಗದ ಒಂದು ದ್ವಾರವನ್ನು ಸದ್ಯಕ್ಕೆ ಮುಚ್ಚಲಾಗಿದೆ. ಮುಂಭಾಗದ ಉಳಿದ ಮೂರು ದ್ವಾರಗಳಲ್ಲಿ ‘ಮೆಟಲ್ ಫ್ರೇಮ್ ಡಿಟೆಕ್ಟರ್’ಗಳನ್ನು ಅಳವಡಿಸಲಾಗಿದ್ದು, ಶಂಕಾಸ್ಪದವಾಗಿ ಕಂಡುಬರುವ ವ್ಯಕ್ತಿಗಳನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಂದಿರುವ ಇಮೇಲ್ಗಳು ತಾಂತ್ರಿಕವಾಗಿ ಕಳುಹಿಸಿದವರ ಗುರುತನ್ನು ಮರೆಮಾಚಿ ಕಳುಹಿಸಿರುವಂತಹದ್ದಾಗಿದೆ. ಇಂತಹ ಬೆದರಿಕೆ ಇಮೇಲ್ಗಳು ಕೇವಲ ಉಡುಪಿ ಜಿಲ್ಲೆಯಷೆ್ಟೇ ಅಲ್ಲದೆ ರಾಜ್ಯದ ಇತರೆ ಹಲವು ಜಿಲ್ಲೆಗಳಿಗೂ ಬಂದಿವೆ. ಸದ್ಯಕ್ಕೆ ಮುನ್ನೆಚ್ಚರಿಕೆಯ ಹಿತದೃಷ್ಟಿಯಿಂದ ಈ ತಾತ್ಕಾಲಿಕ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಒಟ್ಟು ಬಂದಿರುವ ನಾಲ್ಕು ಬೆದರಿಕೆ ಇಮೇಲ್ಗಳ ಪೈಕಿ, ಈಗಾಗಲೇ ಎರಡು ಇಮೇಲ್ಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ತಾಂತ್ರಿಕ ತಂಡಗಳ ಸಹಾಯದೊಂದಿಗೆ ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




