ಮಂಗಳೂರು: ಸ್ಕೂಟರಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಯುವತಿಯ ಮೇಲೆ ಬಸ್ಸು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಂತೂರು ವೃತ್ತದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಮೃತ ಯುವತಿಯನ್ನು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ದೀಪ್ತಿ ಅವರು ತಮ್ಮ ಭಾವಿ ಪತಿಯೊಂದಿಗೆ ಶಿವಭಾಗ್ ಕಡೆಯಿಂದ ವಾಮಂಜೂರು ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದು, ಈ ವೇಳೆ ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ ಬಸ್ಸು ಸ್ಕೂಟರಿಗೆ ತಾಗಿದ್ದು ಈ ವೇಳೆ ಹಿಂಬದಿ ಸವಾರೆಯಾಗಿದ್ದ ದೀಪ್ತಿ ರಸ್ತೆಗೆ ಬಿದ್ದಿದ್ದು ಈ ವೇಳೆ ಅವರ ಮೇಲೆ ಬಸ್ಸು ಹರಿದಿದ್ದು ಗಂಭೀರ ಗಾಯಗೊಂಡಿದ್ದು ಕೂಡಲೇ ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಕೂಟರ್ ಸವಾರನಾಗಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ. ನಂತೂರು ಬಳಿಯ ಬಸ್ ನಿಲ್ದಾಣ ಎದುರಲ್ಲೇ ಘಟನೆ ನಡೆದಿದ್ದು ಕುಡುಪು ಭಾಗಕ್ಕೆ ತೆರಳುತ್ತಿದ್ದ 22 ನಂಬರಿನ ಖಾಸಗಿ ಬಸ್ ಡಿಕ್ಕಿಯಾಗಿದೆ. ಬಸ್ ವೇಗವಾಗಿತ್ತೇ, ಸ್ಕೂಟರ್ ಬಲ ಭಾಗದಿಂದ ಎದುರಿಗೆ ಬಂದಿತ್ತೇ ಎನ್ನುವುದು ಗೊತ್ತಾಗಿಲ್ಲ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಮತ್ತು ಯುವಕ ವಾಮಂಜೂರಿನಲ್ಲಿ ಬರ್ತ್ ಡೇ ಪಾರ್ಟಿಗೆಂದು ತೆರಳುತ್ತಿದ್ದರೆಂದು ತಿಳಿದುಬಂದಿದೆ.
ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ



