ಶಿರ್ವ: ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಮಹಿಳೆಯೋರ್ವರಿಗೆ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷರೀರ್ವರು ಸೇರಿ ಹಲ್ಲೆ ನಡೆಸಿ ಮಾನಹಾನಿಗೆ ಯತ್ನಿಸಿದ ಘಟನೆ ನ. 16 ರಂದು ಬೆಳಗ್ಗೆ ಮುದರಂಗಡಿ ಚರ್ಚ್ ಗುರುಗಳ ನಿವಾಸದಲ್ಲಿ ನಡೆದಿದೆ.
ಜೋಸೆಫ್ ಡಿಸೋಜಾ ಮತ್ತು ಅನಿಲ್ ನೊರೊನ್ಹಾ ಆಪಾದಿತರು. ಮುದರಂಗಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್‌ಚರ್ಚ್‌ಗೆ ಸಂಬಂಧಿಸಿದಂತೆ ನ. 16 ರಂದು ಬೆಳಗ್ಗೆ ಧರ್ಮಗುರುಗಳ ನಿವಾಸದಲ್ಲಿ ಚರ್ಚ್‌ನ ಧರ್ಮಗುರು ರೆ|ಫಾ|ಫೆಡ್ರಿಕ್ ಡಿಸೋಜಾ ಅವರು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನೆ ಮಾಡಿ ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಜೋಸೆಫ್ ಡಿಸೋಜಾ ಮತ್ತು ಅನಿಲ್ ನೊರೊನ್ಹಾ ಏರು ದನಿಯಲ್ಲಿ ಜಗಳವಾಡುತ್ತಿದ್ದರು. ಆ ಸಂದರ್ಭ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಫ್ಲಾವಿಯಾ ಡಿಸೋಜಾ ಮತ್ತು ಕಾರ್ಯದರ್ಶಿ ರಿಚರ್ಡ್ ವಾಜ್ ಅಲ್ಲಿಗೆ ಧಾವಿಸಿದ್ದಾರೆ. ಆಗ ಜೋಸೆಫ್ ಡಿಸೋಜಾ ಮತ್ತು ಅನಿಲ್ ನೊರೊನ್ಹಾ ಕೊಂಕಣಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮಿಬ್ಬರಿಗೂ ಅಕ್ರಮ ಸಂಬಂಧ ಇದೆ ಎಂದು ನಿಂದಿಸಿದ್ದಾರೆ.
ನೀವು ಹೀಗೆಲ್ಲ ಬೈಯ್ಯಬೇಡಿ ಎಂದಾಗ ಎದೆಗೆ ಕೈ ಹಾಕಿ ದೂಡಿ ಹೊಡೆಯಲು ಮುಂದಾಗಿದ್ದಾರೆ. ತಡೆಯಲು ಬಂದ ರಿಚರ್ಡ್ ವಾಜ್ ಅವರಿಗೂ ಕೊಂಕಣಿ ಭಾಷೆಯಲ್ಲಿ ಅವಾಚ್ಯ ಶಬ್ದ ಬಳಸಿ ನಿನಗೆ ಈ ವಿಚಾರ ಬೇಡ ಎಂದು ಬೈದಿದ್ದಾರೆ.
ಆಪಾದಿತರಿಬ್ಬರೂ ಫ್ಲಾವಿಯಾ ಡಿಸೋಜಾ ಅವರಿಗೆ ನೀನು ಇನ್ನು ಮುಂದೆ ಚರ್ಚಿನಲ್ಲಿ ಯಾವುದೇ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದರೆ ನಿನಗೆ ಗತಿ ಕಾಣಿಸುತ್ತೇವೆ ಹಾಗೂ ಸಹಾಯಕ್ಕೆ ಬಂದ ರಿಚರ್ಡ್ ವಾಜ್ ಅವರಿಗೆ ನಿನ್ನ ಕೈ-ಕಾಲು ಮುರಿದು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಧರ್ಮಗುರುಗಳೊಂದಿಗೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಿಟ್ಟಿನಿಂದ ಜೋಸೆಫ್ ಡಿಸೋಜಾ ಮತ್ತು ಅನಿಲ್ ನೊರೊನ್ಹಾ ಅವಾಚ್ಯ ಶಬ್ದಗಳಿಂದ ಬೈದು ಎದೆಗೆ ಕೈ ಹಾಕಿ ತಳ್ಳಿ ಮಾನಕ್ಕೆ ಕುಂದುಂಟು ಮಾಡಿದ್ದಾರೆಂದು ಫ್ಲಾವಿಯಾ ಡಿಸೋಜಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



