ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಆರೋಪಿ, ರೌಡಿ ಶೀಟರ್ ಭರತ್ ಕುಮ್ಡೇಲ್ ಶುಕ್ರವಾರ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಈತ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಸಕಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. 2025ರ ಮೇ 27ರಂದು ನಡೆದ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ ದಲ್ಲೂ ಆರೋಪಿ ಭರತ್ ಕುಮ್ಡೇಲ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅಬ್ದುಲ್ ರಹ್ಮಾನ್‌ನನ್ನು ಕೊಂದಿದ್ದರೆ, ರಹ್ಮಾನ್ ಜೊತೆಯಲ್ಲಿದ್ದ ಕಲಂದರ್ ಶಾಫಿಯ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಭರತ್ ಕುಮ್ಡೇಲ್ ಸುಮಾರು 3-4 ತಿಂಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದ ಬೆನ್ನಿಗೆ ಆರೋಪಿ ಶುಕ್ರವಾರ ಆರೋಪಿಯು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಆರೋಪಿಗೆ ಅ.25 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಭರತ್ ಕುಮ್ಡೇಲು ವಿರುದ್ಧ ಬಂಟ್ವಾಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆ, ಉಪ್ಪಿನಂಗಡಿ ಠಾಣೆ, ಪುತ್ತೂರು ನಗರ ಠಾಣೆಗಳಲ್ಲಿ ಸುಮಾರು 15 ಪ್ರಕರಣಗಳು ದಾಖಲಾಗಿದೆ.
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಕೃತ್ಯ ನಡೆದ ಬಳಿಕ ಪೊಲೀಸರು 14 ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ ಆ್ಯಕ್ಟ್)ಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ದೀಪಕ್, ಚಿಂತನ್, ಪೃಥ್ವಿರಾಜ್ ಜೋಗಿ, ಸುಮಿತ್ ಬಿ. ಆಚಾರ್ಯ, ವಿ. ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ಶೃಂಗೇರಿ ಮೂಲದ ರವಿಸಂಜಯ್ ಜಿ.ಎಸ್., ಶಿವಪ್ರಸಾದ್ ತುಂಬೆ, ಪ್ರದೀಪ, ಶಾಹಿತ್ ಯಾನೆ ಸಾಹಿತ್, ಸಚಿನ್ ಯಾನೆ ಸಚ್ಚು ರೊಟ್ಟಿಗುಡ್ಡೆ, ರಂಜಿತ್, ಭರತ್ ಕುಮ್ಡೇಲು ಭಾಗಿಯಾಗಿದ್ದು, ಎಲ್ಲರೂ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.