ಮಂಗಳೂರು : ನಗರದ ಸಮೀಪದ ಸುರತ್ಕಲ್ ನ ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಲಕ್ಕಿ ಸ್ಕೀಮ್ ಗಳ ಹಾವಳಿ ಮಿತಿಮೀರಿದ್ದು ಈಗಾಗಲೇ ಕೆಲವರ ಸ್ಕೀಮ್ ಗಳ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಗ್ರಾಹಕರಿಗೆ ಪಂಗನಾಮ ಹಾಕಿ ಎಸ್ಕೆಪ್ ಆಗಿದ್ದಾರೆ. ಇವುಗಳ ಸಾಲಿಗೆ ಹೊಸತಾಗಿ ಬಿಎಂಆರ್ ಗ್ರೂಪ್ ಸೇರ್ಪಡೆಯಾಗಿದ್ದು ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಗ್ರಾಹಕರು ಬಿಎಂಆರ್ ಗ್ರೂಪ್ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆಗೈದ ಘಟನೆ ಕೃಷ್ಣಾಪುರದಲ್ಲಿ ಸಂಭವಿಸಿದೆ.
ಬಿಎಂಆರ್ ಗ್ರೂಪಿನ ದಾವೂದ್ ಹಕೀಮ್ ಎಂಬಾತ ಈ ವಂಚನೆ ಎಸಗಿದ್ದು ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ 4-5 ವರ್ಷಗಳಿಂದ ಲಕ್ಕಿ ಸ್ಕೀಮ್ ನಡೆಸುತ್ತಿದ್ದಾನೆ. ಪ್ರತಿ ತಿಂಗಳು ದುಬಾರಿ ಕಾರು, ಫ್ಲಾಟ್ ಗಿಫ್ಟ್ ಸಿಗುವ ಆಮಿಷದಲ್ಲಿ ಸಾವಿರಾರು ಗ್ರಾಹಕರು ಹಣ ಕಟ್ಟಿದ್ದರು. 5 ವರ್ಷದಲ್ಲಿ ಎಂಟು ಸೀಸನ್ ಲಕ್ಕಿ ಸ್ಕಿಮ್ ಮಾಡಿದ್ದು ಸಾವಿರಾರು ಮಂದಿಗೆ ಕಟ್ಟಿದ ಹಣವೇ ಸಿಕ್ಕಿಲ್ಲ ಎಂಬ ಆರೋಪ ಇದೆ.
ಆದರೆ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿಯೇ ಗ್ರಾಹಕರನ್ನು ನಂಬಿಸಿಕೊಂಡು ಬಂದಿದ್ದ. ಆದರೆ ಇಲ್ಲಿಯವರೆಗೂ ಹಣ ಹಿಂತಿರುಗಿಸಿಲ್ಲ ಎಂದು ಗ್ರಾಹಕರು ಆಕ್ರೋಶಗೊಂಡು ಗುರುವಾರ ಬೆಳಗ್ಗೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಹಣ ಕಟ್ಟಿ ಕೈಸುಟ್ಟುಕೊಂಡಿದ್ದು ಕಚೇರಿ ಬಳಿಗೆ ಬಂದು ಗಲಾಟೆ ನಡೆಸಿದ್ದಾರೆ.
ಸುರತ್ಕಲ್ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ವಂಚನೆಯ ಬಗ್ಗೆ ದೂರು ನೀಡುವಂತೆ ಹೇಳಿದ್ದು ಆರೋಪಿತ ದಾವೂದ್ ಹಕೀಮ್ ನನ್ನು ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ. ಆದರೆ ಸಂಜೆಯ ವರೆಗೂ ವಂಚನೆಗೊಳಗಾದವರು ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



