ಉಡುಪಿ: ಟೆಲಿಗ್ರಾಂ ಆ್ಯಪ್‌ನಲ್ಲಿ ಜಾಬ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಅ. 22ರಂದು ಉಡುಪಿಯ ಪ್ರವೀಣ್ ಅವರು ಮೊಬೈಲ್‌ನಲ್ಲಿ ಟೆಲಿಗ್ರಾಂ ಆ್ಯಪ್ ವೀಕ್ಷಿಸುತ್ತಿದ್ದಾಗ ಜಾಬ್ ಲಿಂಕ್ ಬಂದಿತ್ತು. ಲಿಂಕ್‌ನಲ್ಲಿ ಬೇರೆ ಬೇರೆ ಉದ್ಯೋಗದ ಬಗ್ಗೆ ಹಾಗೂ ಹೂಡಿಕೆಯ ಬಗ್ಗೆ ಸಂದೇಶ ಬರುತ್ತಿತ್ತು. ಅದನ್ನು ತೆರೆದಾಗ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಎಂಬ ಗ್ರೂಪ್‌ಗೆ ಸೇರಿದ್ದರು.
ಅನಂತರ ವಿಶಾಲ್ ಕುಮಾರ್ ಎಂಬಾತ ಪ್ರವೀಣ್ ಅವರನ್ನು ಹೊಟೇಲ್ ರೇಟಿಂಗ್ಸ್ ಮತ್ತು ಪ್ರಾಫಿಟ್ ಆನ್ ಇನ್ವೆಸ್ಟ್‌ಮೆಂಟ್ ಬಗ್ಗೆ ಬೇರೆ ಗ್ರೂಪ್ ಗೆ ಸೇರಿಸಿದ್ದನು. ಮೊದಲಿಗೆ 3 ಟಾಸ್ಕ್ ನೀಡಿದ್ದು ಬಳಿಕ ಆರೋಪಿತರು ನೀಡಿದ ಕ್ಯುಆರ್ ಕೋಡ್‌ಗೆ 3,900 ರೂ. ಜಮೆ ಮಾಡಿದ್ದರು. ಈ ವೇಳೆ ಆರೋಪಿಗಳು 8,800 ರೂ. ಮೊತ್ತವನ್ನು ಪ್ರವೀಣ್ ಅವರು ನೀಡಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಇದನ್ನು ನಂಬಿದ ಅವರು ಅ. 22ರಿಂದ 29ರ ವರೆಗೆ ಹಂತ ಹಂತವಾಗಿ 12,38,750 ರೂ.ಗಳನ್ನು ಆರೋಪಿಗಳು ನೀಡಿದ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ನೀಡದೆ ವಂಚನೆ ಎಸಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



