ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ಪಾಡಿ ಗ್ರಾಮದ ಉಡೆಜಾಲು ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ, 10 ಜನರನ್ನು ದಸ್ತಗಿರಿ ಮಾಡಿ, ನಗದು ಹಣ ಮತ್ತು ಕಾದಾಟಕ್ಕೆ ಬಳಸುತ್ತಿದ್ದ ಹುಂಜಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 19 ರಂದು ಸಂಜೆ 6:10 ಗಂಟೆಗೆ ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ. ಜಿ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಈ ಕುರಿತು ಖಚಿತ ಮಾಹಿತಿ ಲಭಿಸಿದೆ.ವಾಲ್ಪಾಡಿ ಗ್ರಾಮದ ಉಡೆಜಾಲು ಎಂಬಲ್ಲಿನ ಮುತ್ತಯ್ಯ ಎಂಬುವವರ ಮನೆಯ ಮುಂಭಾಗದ ಗುಡ್ಡದಲ್ಲಿ ಕೆಲವು ವ್ಯಕ್ತಿಗಳು ಸೇರಿ, ಎರಡು ಅಂಕದ ಕೋಳಿಗಳಿಗೆ ಮಾರಕವಾದ ಬಾಳುಗಳನ್ನು ಕಟ್ಟಿ, ಹಿಂಸಾತ್ಮಕವಾಗಿ ಕಾದಾಡಲು ತಯಾರಾಗಿದ್ದರು ಮತ್ತು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಪೊಲೀಸರನ್ನು ನೋಡಿದ ಕೂಡಲೇ ಕೋಳಿ ಅಂಕದ ಜೂಜಾಟಗಾರರು ಓಡಿ ಪರಾರಿಯಾಗಲು ಯತ್ನಿಸಿದರು. ಸುತ್ತುವರಿದ ಪೊಲೀಸರು ತಕ್ಷಣವೇ 10 ಮಂದಿಯನ್ನು ವಶಕ್ಕೆ ಪಡೆದುಕೊಂಡರು. ಅಜಯ್ , ಸಂಗಮ್ , ಸಂದೇಶ್, ನಿತೇಶ್ ಶೆಟ್ಟಿ ,ಅರುಣ್ ಬಿ.ಎಸ್., ಕೃಷ್ಣಪ್ಪ ಪೂಜಾರಿ ,ರವಿ ಕುಲಾಲ್, ಯಾದವ್ , ದಿನೇಶ್ ಸದಾಶಿವ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಇದೇ ವೇಳೆ, ಸ್ಥಳದಿಂದ ತಪ್ಪಿಸಿಕೊಂಡು ಹೋದ ಸಂಪತ್, ಸುನಿಲ್ ಹಾಗೂ ಇತರರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಕೋಳಿ ಅಂಕದ ಜೂಜಾಟಕ್ಕೆ ಪಣವಾಗಿ ಬಳಸಲು ಉದ್ದೇಶಿಸಿದ್ದ 6 ಹುಂಜಗಳು ಮತ್ತು ರೂ. 4,500 ನಗದು ಹಣವನ್ನು ಪಂಚರ ಸಮ್ಮುಖದಲ್ಲಿ ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು.
ದಸ್ತಗಿರಿಯಾದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಳಿ ಅಂಕದ ದಾಳಿ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ. ಮತ್ತು ಸಿಬ್ಬಂದಿಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಖಿಲ್ ಅಹಮದ್, ರಮೇಶ್, ವೆಂಕಟೇಶ್, ಚಂದ್ರಶೇಖರ ಮತ್ತು ಉಮೇಶ್ ಅವರು ಭಾಗವಹಿಸಿದ್ದರು.




