ಬೆಂಗಳೂರು: ಬೆಂಗಳೂರಿನ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ನಲ್ಲಿ 1.29 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಸಿಇಎನ್ (ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ) ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೃದ್ಧಾಶ್ರಮ ಸ್ಥಾಪಿಸುವ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ
42 ವರ್ಷದ ಜಗದೀಶ್ ಸಿ ಎಂಬವರು “ಕ್ವಾಕ್ ಕ್ವಾಕ್” ಎಂಬ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಪರಿಚಿತರೊಬ್ಬರ ಸಂಪರ್ಕಕ್ಕೆ ಬಂದಿದ್ದರು. ನಂತರ, ಆರೋಪಿಗಳು ಅವರ ವಿಶ್ವಾಸವನ್ನು ಗಳಿಸಿ ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ನೀಡುವ ಭರವಸೆ ನೀಡಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಮೇಘನಾ ರೆಡ್ಡಿ ಎಂಬ ಹೆಸರಿನ ಮಹಿಳೆ ಈ ವಂಚನೆ ಕಾರ್ಯದಲ್ಲಿ ಪ್ರಮುಖ ಆರೋಪಿಯೆಂದು ತಿಳಿದುಬಂದಿದೆ. ಆಕೆ ತನ್ನ ತಂದೆಯ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಬಯಸುತ್ತಿದ್ದೇನೆಂದು ಹೇಳಿ ಜಗದೀಶ್ ಅವರನ್ನು ನಂಬಿಸಿದ್ದಳು. ಇದೇ ನೆಪದಲ್ಲಿ ಜಗದೀಶ್ ಬಳಿ ಹಣವನ್ನೂ ಕೇಳಿದ್ದಳು. ನವೆಂಬರ್ 5 ಮತ್ತು 6ರಂದು ಜಗದೀಶ್ ಅವರು RTGS ಮತ್ತು NEFT ಮುಖಾಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,29,33,253 ರೂಗಳನ್ನು ವರ್ಗಾಯಿಸಿದ್ದರು.
ಖಾತೆಗೆ ಹಣ ಬಂದ ನಂತರ ಮೇಘನಾ, ಜಗದೀಶ್ರನ್ನು ಸಂಪರ್ಕಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಳು. ತಾವು ನೀಡಿದ ಹಣ ವಾಪಸ್ ಬರದಾಗ ವಂಚನೆ ನಡೆದಿರುವುದು ಅರಿತ ಜಗದೀಶ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಳೆದುಹೋದ ಹಣವನ್ನು ಮರುಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



