Home Latest ಬಿಎಸ್ಪಿ ಜಿಲ್ಲಾಧ್ಯಕ್ಷರಾಗಿ ಶೇಖರ್ ಹೆಜಮಾಡಿ ನೇಮಕ : ಮಂಜುನಾಥ್ ವಿ. ಮಾಹಿತಿ…!!

ಬಿಎಸ್ಪಿ ಜಿಲ್ಲಾಧ್ಯಕ್ಷರಾಗಿ ಶೇಖರ್ ಹೆಜಮಾಡಿ ನೇಮಕ : ಮಂಜುನಾಥ್ ವಿ. ಮಾಹಿತಿ…!!

ಉಡುಪಿ: ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ)ಯ ಉಡುಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಗ್ರಾಮದಿಂದ ಜಿಲ್ಲಾ ಮಟ್ಟದ ವರೆಗೆ ಸಂಘಟನೆ ಬಲಪಡಿಸಲಾಗುವುದು. ತನ್ನಿಮಿತ್ತ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಉಡುಪಿ ಜಿಲ್ಲಾಧ್ಯಕ್ಷರಾಗಿ ಕರಾವಳಿಯ ಚಿರಪರಿಚಿತ ಹೋರಾಟಗಾರ ಶೇಖರ್ ಹೆಜಮಾಡಿ ನೇಮಕಗೊಂಡಿದ್ದಾರೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಮಂಜುನಾಥ್ ವಿ. ಮಾಹಿತಿ ನೀಡಿದರು.

ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ (ಜೂ.20) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಕುಂದಾಪುರ, ಆನಂದ್ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ತೊಟ್ಟಂ, ಖಜಾಂಚಿಯಾಗಿ ಪುಷ್ಪಾಕರ್ ಕೊರಂಗ್ರಪಾಡಿ ಹಾಗೂ ಜಿಲ್ಲಾ ಕಚೇರಿಯ ಕಾರ್ಯದರ್ಶಿಯಾಗಿ ವಿಠ್ಠಲ ಸಾಲಿಕೇರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಈಗಾಗಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದೆ. ರಾಜ್ಯ&ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಹೋರಾಟ ನಡೆಸಲು, ಬಹುಜನ ಸಮುದಾಯದ ಧ್ವನಿಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಬಲಪಡಿಸಲು ಪಕ್ಷವು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ ಎಂದರು.

ದಿನನಿತ್ಯದ ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಹಾಗೂ ಎಲ್ಲ ಆಹಾರ ಪದಾರ್ಥಗಳ ಬೆಲೆ ದಿನೇದಿನೆ ಏರಿಕೆ ಆಗುತ್ತಿದೆ. ಇದರಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಆದರೂ ಕೇಂದ್ರ&ರಾಜ್ಯ ಸರ್ಕಾರಗಳು ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿವೆ. ಸಂವಿಧಾನದ ಮೌಲ್ಯ ಉಳಿಸಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯ ಸಾಕಾರಗೊಳಿಸುವುದೇ ಪಕ್ಷದ ಪ್ರಮುಖ ಗುರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಕುಂದಾಪುರ, ಆನಂದ್ ಬ್ರಹ್ಮಾವರ, ಪ್ರಶಾಂತ್ ತೊಟ್ಟಂ, ಪುಷ್ಪಾಕರ್ ಕೊರಂಗ್ರಪಾಡಿ, ವಿಠ್ಠಲ ಸಾಲಿಕೇರಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.