ಕಾರ್ಕಳ: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ಹಾಗೂ ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ಕಾರ್ಕಳ ತಾಲೂಕಿನ ಹಿರ್ಗಾನ-ಲಕ್ಷ್ಮೀಪುರದಲ್ಲಿರುವ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿ, ಸದಾಶಿವ ಪ್ರಭು ಅವರು ತಮ್ಮ ಜೀವನವನ್ನು ಆದರ್ಶಮಯವಾಗಿ ರೂಪಿಸಿಕೊಂಡು ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಎಂದರೆ ಸೇವೆಯಿಂದ ಬಿಡುಗಡೆಯಲ್ಲ; ಅದು ಸೇವೆಯ ಸ್ವರೂಪದಲ್ಲಿನ ಬದಲಾವಣೆ. ಇಷ್ಟು ವರ್ಷಗಳ ಕಾಲ ದೇಶ ಹಾಗೂ ಸಮಾಜಕ್ಕಾಗಿ ದುಡಿದಿರುವ ಅವರು ತಮ್ಮ ಅನುಭವ ಮತ್ತು ಜ್ಞಾನವನ್ನು ಮುಂದಿನ ದಿನಗಳಲ್ಲಿ ಸಮಾಜದ ಉನ್ನತಿಗಾಗಿ ಬಳಸಲಿದ್ದಾರೆ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಅವರು, ತಾವು ಯೋಧನಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ದಿನಗಳನ್ನು ಸ್ಮರಿಸಿದರು. ತಮ್ಮ ತಂದೆ ಹಾಗು ಅಣ್ಣ ತಮ್ಮ ಜೀವನದ ರೋಲ್ ಮಾಡೆಲ್ ಆಗಿದ್ದು, ಅವರ ಮಾರ್ಗದರ್ಶನವೇ ಜೀವನದಲ್ಲಿ ಮುನ್ನಡೆಯಲು ಪ್ರೇರಣೆಯಾಯಿತು ಎಂದು ತಿಳಿಸಿದರು. ಕೋವಿಡ್ ಸಂಕಷ್ಟದ ಕಾಲದ ಅನುಭವಗಳನ್ನು ನೆನಪಿಸಿಕೊಂಡ ಅವರು, ಬೆಂಗಳೂರು ಆಯುಕ್ತ ಹರೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರನ್ನು ಸ್ಮರಿಸಿದರು. ಸಮಾಜದ ಸದಸ್ಯರು ಸರ್ಕಾರಿ ಹುದ್ದೆಗಳಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸಿದಾಗ, ಅದು ಸಮಾಜದ ಏಳಿಗೆ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಕ್ಯಾಂಪ್ಕೋ ಲಿ., ಮಂಗಳೂರು ಅಧ್ಯಕ್ಷರು ಹಾಗೂ ಸರಸ್ವತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಪುತ್ತೂರು ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಉತ್ತಮ ಆದರ್ಶಗಳು, ಧಾರ್ಮಿಕ ಚಟುವಟಿಕೆಗಳು, ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆ ಹಾಗೂ ದೇಶಪ್ರೇಮವನ್ನು ಬೆಳೆಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಸಾರ್ಥಕ ಕ್ಷಣಗಳು ಭಾರತದ ಮಹತ್ವ ಮತ್ತು ವೈಭವವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.


ನಿವೃತ್ತ ಪ್ರಾಂಶುಪಾಲ ವೈ ಪಾಂಡುರಂಗ ನಾಯಕ್ ಮಾತನಾಡಿದರು.
ದೇಶದ ರಕ್ಷಣೆಯಲ್ಲಿ ಯೋಧರ ಸೇವೆ ಎಷ್ಟು ಮಹತ್ವದ್ದೋ, ಸಮಾಜದ ಅಭಿವೃದ್ಧಿಯಲ್ಲಿ ದಕ್ಷ ಆಡಳಿತಗಾರರ ಸೇವೆಯೂ ಅಷ್ಟೇ ಮಹತ್ವದ್ದಾಗಿದೆ. ರಾಷ್ಟ್ರಭಕ್ತಿ, ಕರ್ತವ್ಯನಿಷ್ಠೆ ಮತ್ತು ಜನಪರ ಕಾಳಜಿ ಹೊಂದಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗುತ್ತಾರೆ. ಇಂತಹ ವ್ಯಕ್ತಿತ್ವಗಳು ಯುವಜನರಿಗೆ ಪ್ರೇರಣೆಯಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು


ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಮಾತನಾಡಿ, ಸದಾಶಿವ ಪ್ರಭು ಅವರು ಆಡಳಿತ ಕ್ಷೇತ್ರದ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸೇವಾ ಮನೋಭಾವ ಯುವಜನತೆಗೆ ಮಾದರಿಯಾಗಿದೆ ಎಂದು ಹೇಳಿದರು.

ಉದ್ಯಮಿ ಎಂ.ಎನ್. ನಾಯಕ್, ವಾಸುದೇವ ಕೃಷ್ಣ ನಾಯಕ್ ಭೈರಂಪಳ್ಳಿ, ಮಾಜಿ ಮೊಕ್ತೇಸರ ಅಶೋಕ್ ನಾಯಕ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
.

ಈ ಸಂದರ್ಭದಲ್ಲಿ ಬೆಂಗಳೂರು ಸಪ್ತಪದಿ ವಿವಾಹ ಕೇಂದ್ರ ವತಿಯಿಂದ ಸದಾಶಿವ ಪ್ರಭು ಅವರಿಗೆ “ಸಾರಸ್ವತ ಭಾರ್ಗವ” ಬಿರುದು ಪ್ರದಾನ ಮಾಡಲಾಯಿತು. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ “ಶಕ್ತಿಯುತ ವ್ಯಕ್ತಿಯ ಹಿಂದೆ; ಶಕ್ತಿಯುತ ಮನಸ್ಸು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಬೆಂಗಳೂರಿನ ಗ್ರೇಸ್ ಅಕಾಡೆಮಿಯ ಜೀವನ್ ವಿಜ್ಞಾನ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಉಪನ್ಯಾಸ ನೀಡಿದರು.

ನಿತ್ಯಾನಂದ ನಾಯಕ್ ಹಾಗೂ ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಭುವನೇಶ್ ಪ್ರಭು, ಪತ್ರಕರ್ತ ಪುಂಡಲಿಕ ಮರಾಠೆ ಮತ್ತು ಎಂ.ಡಿ. ಪ್ರಭು ಸನ್ಮಾನ ಪತ್ರಗಳನ್ನು ವಾಚಿಸಿದರು.




