Home Karavali Karnataka 70ನೇ ಕನ್ನಡ ರಾಜ್ಯೋತ್ಸವ ಬೈಂದೂರು ಗಾಂಧಿ ಮೈದಾನದಲ್ಲಿ ಸಂಭ್ರಮದಿಂದ ಆಚರಣೆ….!!

70ನೇ ಕನ್ನಡ ರಾಜ್ಯೋತ್ಸವ ಬೈಂದೂರು ಗಾಂಧಿ ಮೈದಾನದಲ್ಲಿ ಸಂಭ್ರಮದಿಂದ ಆಚರಣೆ….!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಆಡಳಿತ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ ಬೈಂದೂರು ಇದರ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಸಂಭ್ರಮದಲ್ಲಿ ಆಚರಿಸಲಾಯಿತು.

ಬೈಂದೂರು ತಹಶೀಲ್ದಾರ ಹೆಚ್.ರಾಮಚಂದ್ರಪ್ಪ ಧ್ವಜಾರೋಹಣಗೈದು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ವಾಚಿಸಿದರು.
ಶುಭ ಹಾರೈಸಿದರು

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಷೆ ಅನ್ನೋದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ.ಬದಲಾಗಿ ಸಂಸ್ಕೃತಿ,ಪರಂಪರೆ,ಈ ನೆಲದ ಪ್ರತೀಕವಾಗಿದೆ.ನೆಲ ಜಲದ ರಕ್ಷಣೆ ಜೊತೆಗೆ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಕನ್ನಡದ ಕೈಂಕರ್ಯದ ಮನಸ್ಸುಗಳು ಒಂದಾಗುತ್ತಿದ್ದಾಗ ಕನ್ನಡಪರ ಚಟುವಟಿಕೆ ವೃದ್ದಿಸುತ್ತದೆ ಮತ್ತು ಭಾಷೆಯ ಅಭಿಮಾನ ಸದಾ ನಮ್ಮಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ನೆಲ,ಜಲ,ಭಾಷೆ,ಅಭಿಮಾನ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ ರಾಮದಾಸ್, ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ,ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅರುಣ ಕುಮಾ‌ರ್ ಶಿರೂರು,ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಬೈಂದೂರು ಪೊಲೀಸ್ ಠಾಣಾಧಿಕಾರಿ ತಿಮ್ಮೆಶ್ ,ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಕುಮಾ‌ರ್ ರವರನ್ನು ಸಮ್ಮಾನಿಸಲಾಯಿತು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಪತಿ ಹೋಬಳಿದಾ‌ರ್ ಕಾರ್ಯಕ್ರಮ ನಿರ್ವಹಿಸಿದರು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕ‌ರ್ ವಂದಿಸಿದರು.