ಮಲ್ಪೆ : ಸಂಘಟನೆಗಳು ಆಯಾ ಸಮಾಜದ ಅಭಿವೃದ್ದಿಗೆ ಪೂರಕವಾಗಿರಬೇಕು. ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸಮಾಜದ ಅಭಿವೃದ್ದಿಗೆ ಪ್ರಯತ್ನಿಸಬೇಕು. ಸಂಘಟನೆಗಳು ಬೆಳೆದಾಗ ಮಾತ್ರ ಸಮಾಜ ಬಲಿಷ್ಟವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘ ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆ ನೀಡಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಅವರು ರವಿವಾರ ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ನವೀಕೃತ ಹವಾನಿಯಂತ್ರಿತ ಮೊಗವೀರ ಭವನ ಸಮುಚ್ಚಯದ ಉದ್ಘಾಟಿಸಿ ಮಾತನಾಡಿದರು.
ಮನೋರಮ ಮಧ್ವರಾಜ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮೊಟ್ಟಮೊದಲ ಗುರಿಕಾರ ಪದ್ದತಿಯನ್ನು ಪ್ರಾರಂಭ ಮಾಡಿದ್ದು ಮೊಗವೀರ ಸಮಾಜ. 300 ವರ್ಷಗಳ ಹಿಂದೆ ಸಮಾಜದ ಹಿರಿಯರು 300 ಗ್ರಾಮಸಭೆಯನ್ನು ಸೃಷ್ಟಿಮಾಡಿದ್ದಾರೆ ಎಂದರೆ ಅವರ ಸಂಘಟನಾ ಶಕ್ತಿ ಎಷ್ಟುಇತ್ತು ಎನ್ನುವುದನ್ನು ನಾವೆಲ್ಲ ಊಹಿಸಬೇಕಾಗಿದೆ. ಅವರು ಮುಖ್ಯವಾಗಿ ದೈವಿಕ ಶಕ್ತಿಯನ್ನು ಮುಂದಿಟ್ಟುಕೊಂಡು ಈ ಸಂಘಟನೆ ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್ ಅವರು ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಮತ್ಸ್ಯನಿಧಿ ಸಭಾಂಗಣವನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಕರಾವಳಿಯ ಅರ್ಥಿಕತೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಮಹತ್ವವಿದೆ. ಭವಿಷ್ಯದ ಮೀನುಗಾರಿಕೆಯ ಬಗ್ಗೆ ಚಿಂತನೆಗಳನ್ನು ಮಾಡಿ ಯುವ ಪೀಳಿಗೆಗಳಿಗೆ ಮಾರ್ಗದರ್ಶನ ಮಾಡುವ ಕೆಲಸ ಏಳೂರು ಮೊಗವೀರ ಸಂಘದ ಮೂಲಕವೂ ಆಗಬೇಕಾಗಿದೆ ಎಂದರು.
ಯಶಸ್ವಿ ಫಿಶ್‌ಮಿಲ್ ಕಂಪೆನಿಯ ಆಡಳಿತ ಪಾಲುದಾರರಾದ ಸಾಧು ಸಾಲ್ಯಾನ್ ಯಶಸ್ವಿ ಸಭಾಂಗಣ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ನೂತನ ಪಾರ್ಕಿಂಗ್, ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಧ್ಯಕ್ಷ ಆನಂದ ಸಿ. ಕುಂದರ್ ಸಸ್ಯಹಾರ ಪಾಕಶಾಲೆ, ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್ ನಾನ್‌ವೆಜ್ ಪಾಕಶಾಲೆ, ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಜೆ. ಕರ್ಕೇರ ಸಭಾಂಗಣದ ಲಿಫ್ಟ್, ಉದ್ಯಮಿ ವಾಸುದೇವ ಕರ್ಕೇರ ಆಡಳಿತ ಕಚೇರಿ,ಯಶಸ್ವಿ ಫಿಶ್‌ಮಿಲ್ ಕಂಪೆನಿಯ ಪಾಲುದಾರ ಉದಯ ಕುಮಾರ್ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ದೇವದಾಸ್ ಸಾಲ್ಯಾನ್, ನಾಗರಾಜ ಸುವರ್ಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಏಳೂರು ಮೊಗವೀರ ಮಹಾಜನ ಸಂಘದ ನಿಕಟಪೂರ್ವ ಅಧ್ಯಕ್ಷ ಗುಂಡು ಬಿ. ಅಮೀನ್, ಮುಖ್ಯ ಗುರಿಕಾರ ಕೇಶವ ಶ್ರೀಯಾನ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಕಾರ್ತಿಕ್ ಗ್ರೂಪ್‌ನ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.
ಸಾಧಕರಿಗೆ ಸಮ್ಮಾನ- ಗೌರವಾರ್ಪಣೆ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಎಂಜಿನಿಯರ್ ಅಶೋಕ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಸಿ. ಕಾಂಚನ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ವೈವಿಧ್ಯ, ಪಿಹೆಚ್‌ಡಿ ಪದವಿ ಡಾ| ವಿ.ಕೆ. ಯಾದವ, ಡಾ| ಹರ್ಷಲತಾ, ಸಮಾಜ ಸೇವಕ ಈಶ್ವರ್ ಮಲ್ಪೆ, ಸಹಕಾರ ರತ್ನಾ ಪ್ರಶಸ್ತಿ ಪುರಸ್ಕ್ರತರಾದ ರಾಮಚಂದ್ರ ಕುಂದರ್, ನಾಗರಾಜ್ ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ದಾನಿಗಳಿಗೆ, ಗುರಿಕಾರರಿಗೆ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಗೌರವಾರ್ಪಣೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ವಿನಯ ಕರ್ಕೇರ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿಮತ್ತು ವಿಕ್ರಮ್ ಶ್ರೀಯಾನ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಸುವರ್ಣ ವಂದಿಸಿದರು.




