ಉಡುಪಿ: ನಿವೃತ್ತ ಸ್ವಾತಂತ್ರ್ಯ ಯೋಧ ಹಾಗೂ ಭಾರತೀಯ ಸೇನೆಯ ಅಂಗ ಸಂಸ್ಥೆಯಾದ ಜಿ.ಆರ್.ಇ.ಎ.ಎಫ್. (ಬಿ.ಆರ್.ಒ.) ನ ಮಾಜಿ ಫಾರ್ಮಸಿಸ್ಟ್ ಯು.ಕೆ. ಗೋಪಾಲಕೃಷ್ಣರಾವ್ (92) ಅವರು ಜೂನ್ 19ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಸುಮಾರು 24 ವರ್ಷಗಳ ಕಾಲ ಭಾರತೀಯ ಸೇನೆಯ ಅಂಗ ಸಂಸ್ಥೆಯಲ್ಲಿ ಫಾರ್ಮಸಿಸ್ಟ್ ಆಗಿ ಸೇವೆ ಸಲ್ಲಿಸಿದ್ದ ಅವರು ಉತ್ತರ ಭಾರತದ ಜೋಶಿಮಠ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಂಡಮಾನ್-ನಿಕೋಬಾರ್ ದ್ವೀಪಗಳು ಹಾಗೂ ನೆರೆ ರಾಷ್ಟ್ರ ಭೂತಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಸಂಗ್ರಾಮ್ ಸೇವಾ ಮೆಡಲ್ ಹಾಗೂ ವಿದೇಶ್ ಸೇವಾ ಮೆಡಲ್ ನೀಡಿ ಗೌರವಿಸಿತ್ತು. ಅಲ್ಲದೆ, ಉಡುಪಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಪಾದರು ತಮ್ಮ ಪರ್ಯಾಯ ಅವಧಿಯಲ್ಲಿ ‘ಶ್ರೀಕೃಷ್ಣಾನುಗ್ರಹ ಅಭಿನಂದನಾ ಪ್ರಶಸ್ತಿ’ ನೀಡಿ ಸನ್ಮಾನಿಸಿದ್ದರು.
ಮೃತರು ಪತ್ನಿ ಶಾಂತಾ ಜಿ. ರಾವ್, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.




