Home Crime ಯು.ಟಿ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ…!!

ಯು.ಟಿ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ…!!

ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪ : ನ್ಯಾಯಾಂಗ ತನಿಖೆಗೆ ಆಗ್ರಹ

ಮಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನಸಭೆ ಸ್ಪೀಕರ್ ಖಾದರ್ ವಿರುದ್ದ ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಭರತ್ ಶೆಟ್ಟಿ, 2-3 ಪಟ್ಟು ಹೆಚ್ಚು ಬಿಲ್ ತೋರಿಸಿ ಕೋಟ್ಯಂತರ ದುಂದುವೆಚ್ಚ ಮಾಡಿ ಭ್ರಷ್ಟಾಚಾರ ನಡೆಸಿದ್ದು, ಈ ಬಗ್ಗೆ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ವಿಧಾನಸಭೆಯ ಆಡಳಿತವು ಆಡಳಿತಾತ್ಮಕ ಸುಧಾರಣೆ ಹೆಸರಿನಲ್ಲಿ ಭಾರೀ ಅವ್ಯವಹಾರಗಳನ್ನು ನಡೆಸಿದೆ ಎಂಬ ಸಂಶಯಗಳು ಮತ್ತು ಗಂಭೀರ ಆರೋಪಗಳು ಕೇಳಿ ಬಂದಿವೆ. ಸದನದ ಹಿರಿಮೆ ಗರಿಮೆಯನ್ನು ಕಾಪಾಡಬೇಕಾದ ಸಭಾಧ್ಯಕ್ಷರ ಕಚೇರಿಯೇ ಭ್ರಷ್ಟಾಚಾರದ ಆರೋಪಗಳ ಮಸಿ ಮೆತ್ತಿಕೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಭಾಧ್ಯಕ್ಷ ಸ್ಥಾನದ ಗೌರವಕ್ಕೂ ತೀವ್ರ ಧಕ್ಕೆಯುಂಟು ಮಾಡಿದೆ ಎಂದು ಕಿಡಿ ಕಾರಿದರು.

ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ಮಾಡಿದ್ದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಸಂಶಯವಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮರದ ಬಾಗಿಲು ಮತ್ತು ಅನಗತ್ಯವಾದ ನೆಲಹಾಸು ಅಳವಡಿಕೆ, ವಿಧಾನಸೌಧದ ಆವರಣದಲ್ಲಿ ದುಂದುವೆಚ್ಚದ ಪುಸ್ತಕ ಮೇಳ, ವಿಧಾನಸಭೆಯ ಸಭಾಂಗಣದ ಒಳಗೆ ಎಐ ಕ್ಯಾಮರಾ ಅಳವಡಿಕೆ ಮತ್ತು ಹೊಸದಾಗಿ ಟಿವಿಗಳ ಅಳವಡಿಕೆಗಾಗಿ ಬೇಕಾಬಿಟ್ಟಿ ಖರೀದಿ ಮಾಡಿರುವುದು ಆರೋಪಕ್ಕೆ ಗುರಿಯಾಗಿದೆ. ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಪೇನ್‌ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್‌ಗಳ ಖರೀದಿಯಲ್ಲೂ ಸಹ ಮಾರುಕಟ್ಟೆ ದರಕ್ಕೂ ಮತ್ತು ಸಚಿವಾಲಯದ ದರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಲಾಗಿದೆ.

ಎಲ್ಲಾ ಕೆಲಸಗಳನ್ನು ಮಂಗಳೂರಿನ ವ್ಯಕ್ತಿಯ ಮೂಲಕ ಮಾಡಿಸಲಾಗಿದ್ದು, ಅಗತ್ಯ ಇಲ್ಲದಿದ್ದರೂ ಶಾಸಕರ ಭವನದ ನವೀಕರಣ ಹೆಸರಲ್ಲಿ 2ರಿಂದ 3 ಪಟ್ಟು ಬಿಲ್ ತೋರಿಸಲಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಮುಖ್ಯಮಂತ್ರಿಯವರ ಮೌಖಿಕ ಅನುಮತಿಯೊಂದಿಗೆ ತುರ್ತಾಗಿ ಮಾಡಬೇಕಾದ ಕೆಲಸವೆಂದು ತೋರಿಸಿ 4ಜಿ ವಿನಾಯಿತಿಯನ್ನೂ ಪಡೆಯಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಕ್ಕೆ, ರಸ್ತೆ ಗುಂಡಿ ಮುಚ್ಚುವುದಕ್ಕೂ ಹಣ ಇಲ್ಲದ ಸ್ಥಿತಿ ಇರುವಾಗ ಸ್ಪೀಕರ್ ಖಾದರ್ ಈ ರೀತಿ ದುಂದುವೆಚ್ಚ ಯಾಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಇದಲ್ಲದೆ, 5 ದಿನದ ಪುಸ್ತಕ ಮೇಳ ಹೆಸರಲ್ಲಿ ನಾಲ್ಕೂವರೆ ಕೋಟಿ ಬಿಲ್ ಮಾಡಿದ್ದಾರೆ. ಪುಸ್ತಕ ಖರೀದಿ ಅಲ್ಲ, ಕೇವಲ ಮೇಳದ ವೆಚ್ಚವೆಂದು 4.5 ಕೋಟಿ ತೋರಿಸಿದ್ದಾರೆ. ಇದನ್ನು ಮಾಹಿತಿ ಹಕ್ಕಿನಿಂದ ಪಡೆದು ಪತ್ರಿಕೆಯವರೇ ಸುದ್ದಿ ಮಾಡಿದ್ದಾರೆ. ಸಭಾಧ್ಯಕ್ಷ ಪೀಠವನ್ನು ರೋಸ್ ವುಡ್, ಟೀಕ್ ವುಡ್ ನಲ್ಲಿ ಅಲಂಕರಿಸಿ ದುಬಾರಿ ವೆಚ್ಚ ಮಾಡಿದ್ದಾರೆ. ಎಲ್ಲ ಶಾಸಕರಿಗೆ ಗಂಡ ಭೇರುಂಡ ಲಾಂಛನದ ಗೋಡೆ ಗಡಿಯಾರ, ವಿಧಾನಸಭೆಯ ಒಳಗಡೆ 45 ಲಕ್ಷ ವೆಚ್ಚದಲ್ಲಿ ಎಐ ಕ್ಯಾಮರಾ, ಅದರ ಉನ್ನತೀಕರಣಕ್ಕೆ 35 ಲಕ್ಷ, ಶಾಸಕರ ಭವನದ ಎಲ್ಲಾ ಕೊಠಡಿಗಳಿಗೆ ಹೊಸತಾಗಿ ಮಂಚ, ಟೇಬಲ್, ಕುರ್ಚಿಗಳನ್ನು ಹಾಕಲಾಗಿದೆ.ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲದ ಈ ಸಂದರ್ಭದಲ್ಲಿ ಇಷ್ಟೊಂದು ದುಂದುವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಈ ಕಾಂಗ್ರೆಸ್ ಸರ್ಕಾರಕ್ಕೆ ಹಗರಣ ಮಾಡಲು ಇರುವಷ್ಟು ತರಾತುರಿ ಅಭಿವೃದ್ಧಿ ಕಾರ್ಯಗಳಲ್ಲಿ ಕಂಡುಬರುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆಯಾಗಬೇಕು ಮತ್ತು ಸಭಾಧ್ಯಕ್ಷರ ಕಚೇರಿಯ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಪಾರದರ್ಶಕತೆಗಾಗಿ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯಿಸಿದರು.