ಕೊಪ್ಪಳ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ನೇಣು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಣಕಲ್ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮವ್ವ ಭಜಂತ್ರಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ತನ್ನ ಮಗಳು ಜಾನ್ವಿ ಮತ್ತು ಮಗ ರಮೇಶ್ ಗೆ ಮೊದಲು ನೇಣು ಹಾಕಿ ನಂತರ ತಾನು ನೇಣು ಹಾಕಿ ಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂಬತ್ತು ವರ್ಷಗಳ ಹಿಂದೆ ಕೊಪ್ಪಳದ ಕಕ್ಕಿಹಳ್ಳಿ ಗ್ರಾಮದ ನಿವಾಸಿ ಹನುಮಪ್ಪ ಅವರೊಂದಿಗೆ ವಿವಾಹ ನಡೆದಿತ್ತು. ಆದರೆ ಗಂಡನ ಮನೆಯನ್ನು ಬಿಟ್ಟು ಲಕ್ಷ್ಮವ್ವ ಅವರು ತಮ್ಮ ತವರು ಮನೆಯಾದ ಬೆಣಕಲ್ ಗ್ರಾಮದಲ್ಲೇ ವಾಸವಿದ್ದರು.
“ನನ್ನ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇದೇ ಗ್ರಾಮದ ಬೀರಪ್ಪ ಮಠದ ಎಂಬ ವ್ಯಕ್ತಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ನಾವು ಕೂಡ ಬುದ್ಧಿವಾದ ಹೇಳಿದೆವು ಆದರೆ ಕೇಳಲಿಲ್ಲ. ಆತನ ಕಿರುಕುಳದಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.



