ಶಿವಮೊಗ್ಗ: ರಸ್ತೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಕಾರು ಢಿಕ್ಕಿ ಹೊಡೆದು ಮಗು ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯ ವಿರುಪಿನಕೊಪ್ಪದಲ್ಲಿ ಸಂಭವಿಸಿದೆ.
ಸಾವನ್ನಪ್ಪಿದ ಮಗು ಷಣ್ಮುಖ ಎಂಬುವರ ಪುತ್ರ ವಿನಯ್ (2) ಎಂದು ತಿಳಿಯಲಾಗಿದೆ. ರಸ್ತೆಯಲ್ಲಿ ಆಟವಾಡುವ ವೇಳೆ ಕೋಟೆಗಂಗೂರು ಕಡೆಯಿಂದ ಸಾಗರ ರಸ್ತೆಯೆಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರು ಢಿಕ್ಕಿಯಿಂದ ವಿನಯ್ ತಲೆ, ಕೈ ಸೇರಿದಂತೆ ದೇಹದ ವಿವಿಧೆಡೆ ತೀವ್ರ ಸ್ವರೂಪದ ಗಾಯವಾಗಿತ್ತು. ಕೂಡಲೇ ಮಗುವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



