ಮಗು ಹೆಡೆದು ದತ್ತು ಕೇಂದ್ರಕ್ಕೆ ಒಪ್ಪಿಸಿದ ಸಂತ್ರಸ್ತೆ….
ಸಹೋದರನಾಗಿ ದುರಂತ ತಪ್ಪಿಸಿದ ವಿಶು ಶೆಟ್ಟಿ….
ಉಡುಪಿ : ಪ್ರೀತಿ ಪ್ರೇಮದ ಬಲೆಗೆ ಬಿದ್ದು ಗರ್ಭಿಣಿಯಾದ ಯುವತಿಗೆ ಸಾಂತ್ವನ ಕೇಂದ್ರದ ಮೂಲಕ ಸೂಕ್ತ ಮಾರ್ಗದರ್ಶನ ನೀಡಿ ಆಕೆಯ ಬದುಕು ದುರಂತವಾಗುವುದನ್ನು ಸಮಾಜ ಸೇವಕ ವಿಶು ಶೆಟ್ಟಿ ತಪ್ಪಿಸಿದ ಘಟನೆ ನಡೆದಿದೆ.
ಹೊರ ರಾಜ್ಯದ ದೇಶದ ಮಹಾ ನಗರವೊಂದರಲ್ಲಿ ಉದ್ಯೋಗಸ್ಥೆಯಾಗಿದ್ದ ಯುವತಿಗೆ ಪ್ರಿಯಕರ ಗರ್ಭಿಣಿಯಾಗಿಸಿ ಕೈಕೊಟ್ಟಿದ್ದ. ಮದುವೆಯಾಗದೆ ಗರ್ಭಿಣಿಯಾಗಿರುವುದು ಒಂದೆಡೆಯಾದರೆ, ಸಮಾಜಕ್ಕೆ ಹಾಗೂ ತನ್ನ ಹೆತ್ತವರಿಗೆ ವಿಷಯ ತಿಳಿದರೆ ದೊಡ್ಡ ರಾದ್ಧಾಂತವೇ ನಡೆದೀತು ಎಂದು ಯುವತಿ ತೀರಾ ಆತಂಕಕ್ಕೆ ಒಳಗಾಗಿದ್ದಳು. ತನಗಾದ ಮೋಸವನ್ನು ಯಾರಿಗೂ ತಿಳಿಸಲಾಗದೆ ಒದ್ದಾಡುತ್ತಿದ್ದಳು. ಈ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ ಆಪತ್ಭಾಂಧವ ವಿಶು ಶೆಟ್ಟಿ ಅಂಬಲಪಾಡಿ ಅವರು ಸಾಂತ್ವನ ಕೇಂದ್ರದ ಮೂಲಕ ಯುವತಿಯೊಡನೆ ಸಮಾಲೋಚಿಸಿ ಆಕೆಗೆ ಧೈರ್ಯ ತುಂಬಿ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಆಕೆಗೆ ಆಶ್ರಯ ಒದಗಿಸಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಯುವತಿ ಕೊನೆಗೆ ತಾನು ಹೆತ್ತ ಮಗುವನ್ನು ನೋಂದಾಯಿತ ದತ್ತು ಕೇಂದ್ರವೊಂದಕ್ಕೆ ನೀಡಿದ್ದಾಳೆ.
ತನ್ನ ಕರುಳ ಕುಡಿಯನ್ನು ಕೇಂದ್ರಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಆ ಯುವತಿಯ ದು:ಖ, ಸಂಕಟ ಹೇಳತೀರದಾಗಿತ್ತು. ಇಂದಿನ ಪ್ರಜ್ಞಾವಂತ ಯುವತಿಯರು ಮೋಹದ ಬಲೆಗೆ ಬಿದ್ದು ಮೋಸ ಹೋಗಬಾರದು. ಯಾವುದೇ ಕಾರಣಕ್ಕೂ ಪ್ರೀತಿ ಪ್ರೇಮದ ಹೆಸರಲ್ಲಿ ದೈಹಿಕ ಸಂಬಂಧಕ್ಕೆ ಮುಂದಾಗ ಬಾರದು.ಇಲ್ಲಿ ಎಡವಟ್ಟಾದರೆ ಅದರ ಪರಿಣಾಮವನ್ನು ಯುವಕನಿಗಿಂತಲೂ ಯುವತಿಯರೇ ಹೆಚ್ಚು ಅನುಭವಿಸಬೇಕಾಗುತ್ತದೆ. ಈ ಪ್ರಕರಣದಲ್ಲೂ ಇದೇ ಆಗಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಸಂತ್ರಸ್ತೆಯ ಬಾಳು ದುರಂತವಾಗುವ ಅಪಾಯವಿತ್ತು. ಆಕೆಗೆ ಧೈರ್ಯ ತುಂಬಿ ಹೆರಿಗೆ ಆಗುವಂತೆ ನೋಡಿಕೊಳ್ಳಲಾಯಿತು.
ಮಗುವಿಗೆ ಜನ್ಮ ನೀಡಿ 10 ದಿನ ಮಗವಿನೊಂದಿಗೆ ಇದ್ದು, ನಂತರ ಕಾನೂನು ಪ್ರಕಾರ ದತ್ತು ಕೊಡುವ ಪ್ರಕ್ರಿಯೆ ನಡೆಸಲಾಗಿದೆ. ಮಗುವನ್ನು ದತ್ತುಕೇಂದ್ರಕ್ಕೆ ನೀಡುವಾಗ ಮಗುವಿನ ಮೇಲಿನ ಮೋಹದಿಂದ ಆಕೆಯ ಅಳು, ದು:ಖವನ್ನು ಕಂಡಾಗ ಎಂತಹವರಿಗೂ ಈ ಪರಿಸ್ಥಿತಿ ಬರಬಾರದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಮರ್ಯಾದೆಗೆ ಅಂಜಿ ಯುವತಿ ತನಗೆ ಮೋಸ ಮಾಡಿ ತನ್ನನ್ನು ಈ ದುರಂತ ಸ್ಥಿತಿಗೆ ದೂಡಿದ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಿಲ್ಲ. ಅಲ್ಲದೆ ಈ ವಿಷಯವನ್ನು ಹೆತ್ತವರಿಗೂ ಹೇಳಲು ಕೂಡಾ ಆಕೆಗೆ ಸಾಧ್ಯವಾಗಿಲ್ಲ. ಸಮಾಜಕ್ಕೆ ಈ ವಿಷಯ ಗೊತ್ತಾದರೆ ತನ್ನ ಭವಿಷ್ಯ ಎನಾಗಬಹುದು ? ತನ್ನ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತದೆ ಅಲ್ಲದೆ ಅವಮಾನ ತಾಳಲಾರದೆ ಹೆತ್ತವರು ಆತ್ಮಹತ್ಯೆಗೆ ಕೂಡಾ ಶರಣಾಗ ಬಹುದು ಎಂಬ ಚಿಂತೆಯೇ ಆಕೆಯನ್ನು ಅಧೀರಳನ್ನಾಗಿಸಿತ್ತು.
ತಪ್ಪು ಯಾರದ್ದೇ ಇರಲಿ. ನೋವು ಅನುಭವಿಸುವುದು ಹೆಣ್ಣೇ. ತಾನು ಹೆತ್ತ ಮಗುವನ್ನು ದತ್ತು ಕೇಂದ್ರಕ್ಕೆ ನೀಡುವಾಗ ಆಕೆ ಅನುಭವಿಸಿದ ಆ ಸಂಕಟ, ದು:ಖವನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಮಗುವನ್ನು ಕಳೆದುಕೊಂಡ ನೋವು ಜೀವನವಿಡೀ ಕಾಡುವಂತಹುದು. ಆದ್ದರಿಂದ ಹೆಣ್ಮಕ್ಕಳು ಜಾಗರೂಕರಾಗಿರಬೇಕು. ಮದುವೆಯ ಮುಂಚೆ ಯಾವುದೇ ಕಾರಣಕ್ಕೂ ದೈಹಿಕ ಸಂಬಂಧ ಬೆಳೆಸಬೇಡಿ. ತಂದೆ ತಾಯಂದಿರು ಕೂಡಾ ದೂರದ ಊರಲ್ಲಿ ತಮ್ಮ ಮಗಳು ಉದ್ಯೋಗದಲ್ಲಿದ್ದಾಳೆ, ಆಕೆ ಕಳುಹಿಸಿದ ಹಣವನ್ನು ಪಡೆದುಕೊಂಡು ಸುಮ್ಮನಿರುವುದಲ್ಲ. ಆಕೆಯ ಬದುಕು ಅಲ್ಲಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ನಿಗಾ ಇರಿಸಬೇಕು. ಇಲ್ಲವಾದಲ್ಲಿ ಇಂತಹ ದುರಂತಗಳು ಸಂಭವಿಸುತ್ತವೆ. ಈ ಪ್ರಕರಣದಲ್ಲಿ ಯುವತಿಯ ಭವಿಷ್ಯದ ದೃಷ್ಟಿಯಿಂದ ಆಕೆಯ ಮಾನಕ್ಕೆ ಕುಂದು ಬಾರದಂತೆ ಗೌಪ್ಯವಾಗಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ಓರ್ವ ಸಹೋದರನಾಗಿ ಆಕೆಯ ಸಂಕಷ್ಟಕ್ಕೆ ನೆರವಾಗಿದ್ದೇನೆ. ಇಲ್ಲಿ ಸಾಂತ್ವನ ಕೇಂದ್ರದ ಸಿಬಂದಿಗಳ ನೆರವು ಸ್ಮರಣೀಯ ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.



