Home Dskshina Kannada ಬಂಟ್ವಾಳದಲ್ಲಿ ಮಾದಕ ವಸ್ತು ಜಾಲ ಪತ್ತೆ : 42 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ..!

ಬಂಟ್ವಾಳದಲ್ಲಿ ಮಾದಕ ವಸ್ತು ಜಾಲ ಪತ್ತೆ : 42 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ..!

ಬಂಟ್ವಾಳ: ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 42.30 ಲಕ್ಷ ರೂ. ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಬೊಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಹಾಗೂ ಮೊಹಮ್ಮದ್ ಶಾಹೀಂ (19) ಎಂದು ಗುರುತಿಸಲಾಗಿದೆ.

ಮೇ 2ರಂದು ಸಂಜೆ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಟಿ. ಅವರಿಗೆ ಮಾದಕ ವಸ್ತು ಸಾಗಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ, ಸಿಬ್ಬಂದಿಗಳೊಂದಿಗೆ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ತಪಾಸಣೆ ನಡೆಸಿದರು. ಈ ವೇಳೆ KA-20-Z-9585 ಸಂಖ್ಯೆಯ ಬೊಲೆರೋ ವಾಹನದಲ್ಲಿ ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.

ಬಂಧಿತರಿಂದ 423 ಗ್ರಾಂ ಎಂ.ಡಿ.ಎಂ.ಎ, ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 46.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾ ಮೂಲದ ವ್ಯಕ್ತಿಯಿಂದ ಎಂ.ಡಿ.ಎಂ.ಎ ಖರೀದಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.