Home Crime ಕಡಬದಲ್ಲಿ ಲಂಚ ಸ್ವೀಕಾರ ವೇಳೆ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ : ಭೂ ಕನ್ವರ್ಷನ್‌ಗೆ ₹1000 ಬೇಡಿಕೆ...

ಕಡಬದಲ್ಲಿ ಲಂಚ ಸ್ವೀಕಾರ ವೇಳೆ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ : ಭೂ ಕನ್ವರ್ಷನ್‌ಗೆ ₹1000 ಬೇಡಿಕೆ ಆರೋಪ..!

ಕಡಬ, ಫೆ.17:  ಕಡಬ ತಾಲೂಕಿನಲ್ಲಿ ಕಂದಾಯ ನಿರೀಕ್ಷಕನೊಬ್ಬ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಕಡಬ ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪ್ರತಿ ಸೆಂಟ್ಸ್‌ಗೆ ₹100 ರಂತೆ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಒಟ್ಟು ₹1000 ಹಣವನ್ನು ಫೆಬ್ರವರಿ 4, 2026ರಂದು ತಮ್ಮ ಕಚೇರಿಯಲ್ಲೇ ಸ್ವೀಕರಿಸುವಾಗ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿರುವುದು ತಿಳಿದುಬಂದಿದೆ.

ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಕೆಲಸಗಳಿಗೂ ವಿಳಂಬ ನೀತಿ ಅನುಸರಿಸುವುದು, ಸಾರ್ವಜನಿಕರನ್ನು ಅಲೆದಾಡಿಸುವುದು ಮತ್ತು ಕೊನೆಗೆ ಹಣದ ಬೇಡಿಕೆಯಿಡುವುದು ಸಾಮಾನ್ಯವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಾರ್ವಜನಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೂ, ಕೆಲ ಭ್ರಷ್ಟ ಅಧಿಕಾರಿಗಳ ವರ್ತನೆ ಜನರಲ್ಲಿ ನಿರಾಶೆ ಮೂಡಿಸುತ್ತಿದೆ. ಈ ಸಂಬಂಧ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.