Home Latest ಉಡುಪಿ: ಸಮಾಧಾನ ಮಹೋತ್ಸವದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ :ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು..!!

ಉಡುಪಿ: ಸಮಾಧಾನ ಮಹೋತ್ಸವದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ :ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು..!!

ಉಡುಪಿ : ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ.

 

ಉಡುಪಿ ನಗರದ ಮಿಷನ್ ಕಂಪೌಂಡಿನಲ್ಲಿ ಮಾರ್ಚ್ 20ರಿಂದ 22ರ ವರೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರ ಹಿಂದೆ ಮತಾಂತರದ ಷಡ್ಯಂತ್ರ ಇದೆ, ಲಾಜರಸ್ ಭಾಗವಹಿಸಲು ಅವಕಾಶ ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆಕ್ಷೇಪಿಸಿದ್ದರು. ಅಲ್ಲದೆ, ಜಿಲ್ಲಾಡಳಿತಕ್ಕೂ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯ ಮಾಡಿದ್ದರು.

 

ಆದರೆ ಕಾರ್ಯಕ್ರಮ ಸಂಘಟಕರು ಹೈಕೋರ್ಟ್ ಮೂಲಕ ಆದೇಶ ತಂದಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಭದ್ರತೆ ನೀಡಬೇಕು ಎನ್ನುವ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ನೀಡಿದ್ದಾರೆ. ತಮಿಳುನಾಡಿನ ಮಿಷನರಿ ಮೋಹನ್ ಲಾಝರಸ್ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಕ್ರಮವೂ ಆರಂಭಗೊಂಡಿದೆ.

 

ತಮಿಳುನಾಡಿನಲ್ಲಿ ಲಾಝರಸ್ ವಿರುದ್ಧ ಹಲವು ಕೇಸು ದಾಖಲಾಗಿದ್ದು, ಹಿಂದು ವಿರೋಧಿ ಭಾಷಣಕ್ಕಾಗಿ ಕುಖ್ಯಾತಿ ಪಡೆದಿದ್ದಾರೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿಯಿಂದಿರುವ ಉಡುಪಿಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು. ಇದರಂತೆ, ಪೊಲೀಸರು ಕಾರ್ಯಕ್ರಮ ಸಂಘಟಕರಿಗೆ ನೋಟೀಸ್ ನೀಡಿ, ಲಾಝರಸ್ ಬದಲು ಬೇರೆ ಭಾಷಣಕಾರರನ್ನು ಕರೆಯುವಂತೆ ಸಲಹೆ ಮಾಡಿದ್ದರು. ಆದರೆ ಸಂಘಟಕರು ಹೈಕೋರ್ಟ್ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ನಡೆಸಿದ್ದಾರೆ.

 

ಇದೇ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶ್ರೀಕಾಂತ್ ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

 

ಮೊದಲು ಗೋವಿಂದ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಬಳಿಕ ಸಮಾಧಾನ ಮಹೋತ್ಸವ ನಡೆಯುವ ಮಿಷನ್ ಕಂಪೌಂಡ್ ಮೈದಾನದ ಕಡೆಗೆ ತೆರಳಲು ಯತ್ನಿಸಿದರು.

 

ಈ ವೇಳೆ ಪೊಲೀಸರು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಮಹೇಶ್ ಬೈಲೂರು ಉಮೇಶ್ ನಾಯ್ಕ್ ಸೂಡ, ರಾಜೇಶ್ ಉಚ್ಚಿಲ, ಉಮೇಶ್ ಪಕ್ಕಾಲು, ರಾಜೇಶ್ ಮೆಂಡನ್, ಶೈಲೇಶ್ ಶೆಟ್ಟಿ ಮಣಿಪಾಲ ಸೇರಿದಂತೆ ವಿವಿಧ

ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಳಿಕ ಮಣಿಪಾಲ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದ್ದಾರೆ.

ಅಹಿತಕರ ಘಟನೆಗಳು ನಡೆಯದಂತೆ ಉಡುಪಿ ನಗರ ಠಾಣೆಯ ಪ್ರಭಾರ ಇನ್ಸೆಕ್ಟ‌ರ್ ಮಹೇಶ್‌ ಪ್ರಸಾದ್ ನೇತೃತ್ವದಲ್ಲಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.