ಉಪ್ಪಿನಂಗಡಿ : 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಸಜಿಪ ಮೂಡ ಗ್ರಾಮದ ನಿವಾಸಿ 32 ವರ್ಷ ಪ್ರಾಯದ ವಾರೆಂಟ್ ಅಸಾಮಿ ಫಾರೂಕ್ @ ಉಮ್ಮರ್ ಫಾರೂಕ್ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಬಂಟ್ವಾಳ ತಾಲೂಕಿನ ಮದ್ವ ಪ್ರದೇಶದಲ್ಲಿ ಅಕ್ಟೋಬರ್ 15ರಂದು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.
ಈತನ ವಿರುದ್ಧ ಉಪ್ಪಿನಂಗಡಿ, ಕಡಬ, ವಿಟ್ಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಕೊಣಾಜೆ, ಬರ್ಕೆ ಮತ್ತು ಬಜಪೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಮನೆ ಕಳವು, ದರೋಡೆ ಹಾಗೂ ಆಸ್ತಿ ಕಳವು ಪ್ರಕರಣಗಳಾಗಿವೆ.
ಉಪ್ಪಿನಂಗಡಿ ಠಾಣೆಯ ಅ.ಕ್ರ. 38/2020, 39/2020, 48/2012, 119/2020 ಹಾಗೂ ಕಡಬ ಠಾಣೆಯ 43 ರಿಂದ 46/2020 ರವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ 457, 380, 201, 34 ಮುಂತಾದ ಕಲಂಗಳ ಅಡಿಯಲ್ಲಿ ಆರೋಪಗಳು ದಾಖಲಾಗಿವೆ.



