Home Latest ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆ…!!

ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆ…!!

ಉಡುಪಿ : 12 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ದಾಖಲೆಯ 4339ನೇ ದಿನವನ್ನು ಪೂರೈಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ ಹಾಗೂ 2047ರ ವಿಕಸಿತ ಭಾರತದ ಸಂಕಲ್ಪದ ಯಶಸ್ವಿ ಸಾಕಾರಕ್ಕಾಗಿ ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾ ಅಧ್ಯಕ್ಷ ಕುತ್ಯಾರು ನವೀನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಹಾಗೂ ದಿನಕರ ಶೆಟ್ಟಿ, ಜಿಲ್ಲಾ ವಕ್ತಾರ ಶ್ರೀ ಮಧುಕರ ಮುದ್ರಾಡಿ, ಸುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾದ ಸಂಧ್ಯಾ ರಮೇಶ್, ನಯನಾ ಗಣೇಶ್, ವೀಣಾ ಶೆಟ್ಟಿ, ಪ್ರಜ್ಞಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದನ್ನು ಸ್ಮರಿಸಲಾಯಿತು. ದೇಶದ ಸಮಗ್ರ ಅಭಿವೃದ್ಧಿ, ಜನಕಲ್ಯಾಣ ಹಾಗೂ 2047ರ ವೇಳೆಗೆ ವಿಕಸಿತ ಭಾರತದ ಗುರಿ ಯಶಸ್ವಿಯಾಗಿ ಸಾಕಾರಗೊಳ್ಳಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.