Home Crime ಆತ್ಮಹತ್ಯೆಗೆ ಯತ್ನಿಸಿದ ಯುವತಿ : ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತ್ಯು…!!

ಆತ್ಮಹತ್ಯೆಗೆ ಯತ್ನಿಸಿದ ಯುವತಿ : ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತ್ಯು…!!

ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯಕೀಯ ವಿದ್ಯಾರ್ಥಿನಿ ಮನೆಯವರಿಂದ ರಕ್ಷಿಸಲ್ಪಟ್ಟು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೇತೂರು ಪಾರ ಸಮೀಪ ಬುಧವಾರ ಬೆಳಗ್ಗೆ  ನಡೆದಿದೆ.

ಮೃತರನ್ನು ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿ ಬೇಡಡ್ಕ ಬೇತೂರುಪಾರ ತಚ್ಚಾರ್ ಕುಂಡುವಿನ ಬಾಬು ಎಂಬವರ ಪುತ್ರಿ ಮಹಿಮಾ (19) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಗ್ಗೆ ಮಹಿಮಾ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಆಕೆಯ ಸಹೋದರ ಮಹೇಶ್ ಆಕೆಯನ್ನು ತಕ್ಷಣ ನೇಣು ಹಗ್ಗದಿಂದ ಕೆಳಕ್ಕಿಳಿಸಿ ಕಾರಿನಲ್ಲಿ ಆಸ್ಪತ್ರೆಗೆ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು ಎಂದು ತಿಳಿಯಲಾಗಿದೆ.

ಈ ಸಂದರ್ಭ ಮನೆಯಿಂದ ಒಂದು ಕಿ.ಮೀ.ನಷ್ಟು ದೂರ ಸಾಗಿದಾಗ ಬೇತೂರು ಪಾರ ಸಮೀಪ ಕಾರು ಅಪಘಾತಕ್ಕೀಡಾಗಿದೆ. ಇದರಿಂದ ಗಾಯಗೊಂಡಿದ್ದ ಮಹಿಮಾ, ಮಹೇಶ್ ಮತ್ತು ಅವರ ತಾಯಿ ವನಜಾರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಿಮಾ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಘಟನೆಯಿಂದ ಮಹೇಶ್ ಮತ್ತು ವನಜಾ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ವಿದ್ಯಾರ್ಥಿನಿ ನೇಣು ಬಿಗಿದ ಹಾಗೂ ರಸ್ತೆ ಅಪಘಾತಕ್ಕೆ ಸಂಬಂಧಿಸಿ ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.