Home Crime ನಿಷೇಧಿತ ಮಾದಕವಸ್ತು ಎಂಡಿಎಂಎ ಸಾಗಾಟ : ಇಬ್ಬರು ಅರೆಸ್ಟ್…!!

ನಿಷೇಧಿತ ಮಾದಕವಸ್ತು ಎಂಡಿಎಂಎ ಸಾಗಾಟ : ಇಬ್ಬರು ಅರೆಸ್ಟ್…!!

ಮಂಗಳೂರು : ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ಮೌಲ್ಯ ಸುಮಾರು 16.40 ಲಕ್ಷ ರೂಪಯಿ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಹೊಯಿಗೆ ಬಜಾರ್ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜೂನ್ 5ರಂದು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಸುಮಾರು ₹10.40 ಲಕ್ಷ ಮೌಲ್ಯದ 104 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಜಿಪ್-ಲಾಕ್ ಕವರ್‌ಗಳು ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯನ್ನು ಪ್ರಣಾಮ್ ಕೋಟ್ಯಾನ್ (30) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 2016ರಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ, 2026ರಲ್ಲಿ ಮಾದಕವಸ್ತು ಸೇವನೆ ಪ್ರಕರಣ, 2022ರಲ್ಲಿ ಅಬಕಾರಿ ಇಲಾಖೆಯಲ್ಲಿ ಗಾಂಜಾ ಸಂಬಂಧಿತ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಇನ್ನೊಂದು ಪ್ರಕರಣದಲ್ಲಿ ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜೂನ್ 5ರಂದು ಕಾರ್ಯಾಚರಣೆ ನಡೆಸಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು ₹6 ಲಕ್ಷ ಮೌಲ್ಯದ 60 ಗ್ರಾಂ ಎಂಡಿಎಂಎ, ಜಿಪ್-ಲಾಕ್ ಕವರ್‌ಗಳು, ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯನ್ನು ಧನರಾಜ್ ಪೂಜಾರಿ (33) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ದಕ್ಷಿಣ, ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸೇರಿದಂತೆ ಸುಮಾರು 12 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ಆರೋಪಿಗೆ ಮೂರು ವರ್ಷಗಳ ಶಿಕ್ಷೆಯೂ ವಿಧಿಸಲಾಗಿತ್ತು.

ಈ ಮಾದಕವಸ್ತು ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.