Home Latest ಅ.17ರಂದು ಉಡುಪಿಯಲ್ಲಿ 9ನೇ ವರ್ಷದ ದಾಂಡಿಯಾ ಸಂಭ್ರಮ…!!

ಅ.17ರಂದು ಉಡುಪಿಯಲ್ಲಿ 9ನೇ ವರ್ಷದ ದಾಂಡಿಯಾ ಸಂಭ್ರಮ…!!

ಉಡುಪಿ: ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಯುವ ಘಟಕದ ನೇತೃತ್ವದಲ್ಲಿ 9ನೇ ವರ್ಷದ ‘ಉಡುಪಿ ದಾಂಡಿಯಾ 2026’ ಕಾರ್ಯಕ್ರಮ ಅ.17ರಂದು ಸಂಜೆ 6 ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಯುವ ಘಟಕದ ಅಧ್ಯಕ್ಷ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಸಮೂಹ ನೃತ್ಯ ಹಾಗೂ ಮಕ್ಕಳ ಅತ್ಯುತ್ತಮ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಬಾರಿ ವಿಶೇಷ ಆಕರ್ಷಣೆಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯ ಸ್ಪರ್ಧೆ ನಡೆಯಲಿದ್ದು, 2026ರ ಅ.17ರ ವೇಳೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದ ದಂಪತಿಗಳಿಗೆ ಮಾತ್ರ ಈ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ವಿಶ್ವ ಚಾಂಪಿಯನ್ ಭಾರತದ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಧನಲಕ್ಷ್ಮೀ ಪೂಜಾರಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಹಾಗೂ ಭರತನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾದ ವಿದುಷಿ ದೀಕ್ಷಾ ಸೇರಿದಂತೆ ಹಲವು ತುಳು ಚಿತ್ರರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಮೈದಾನವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗುವುದು. ಆಹಾರ ಮಳಿಗೆಗಳ ವ್ಯವಸ್ಥೆಯೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನವೂ ನಡೆಯಲಿದೆ. ಕಾರ್ಯಕ್ರಮ ವೀಕ್ಷಿಸಲು ಹಾಗೂ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಘ್ನೇಶ್ ಪ್ರಭು, ವಿವೇಕ್ ಕಾಮತ್, ಅಶ್ವಥ್ ದೇವಾಡಿಗ ಹಾಗೂ ಶ್ರೇಯಸ್ ದೇವಾಡಿಗ ಉಪಸ್ಥಿತರಿದ್ದರು.