Home Crime ಆತ್ಮಹತ್ಯೆಗೆ ಪ್ರಚೋದನೆ ಆರೋಪ : ಪತ್ನಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು…!!

ಆತ್ಮಹತ್ಯೆಗೆ ಪ್ರಚೋದನೆ ಆರೋಪ : ಪತ್ನಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು…!!

ಶಿರ್ವ: ಮಹಾರಾಷ್ಟ್ರದ ಸಿಂಧುದುರ್ಗ್ ನಿವಾಸಿ ಅಫ್ಸಾನಾ ರಮಝಾನ್ ಕಾರ್ನೇಕರ್ ಅವರು ನೀಡಿದ ದೂರಿನ ಮೇರೆಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಅಫ್ಸಾನಾ ಅವರ ತಮ್ಮ ಜಹೀರ್ ಎ. ಮಂಗಾಂವ್ಕರ್ ಅವರು ಕಾಪು ತಾಲೂಕಿನ ಬೆಳಪು ಗ್ರಾಮದ ಸಮೀನಾ ಅವರೊಂದಿಗೆ 19/02/2012ರಂದು ಮುಲೂರು ಜುಮ್ಮಾ ಮಸೀದಿಯಲ್ಲಿ ವಿವಾಹವಾಗಿದ್ದು, ದಂಪತಿಗೆ ದಾನಿಶ್ ಹಾಗೂ ಜೈದ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಸುಮಾರು ಐದು ವರ್ಷಗಳ ಬಳಿಕ ಸಮೀನಾ ಅವರು ಗಂಡನೊಂದಿಗೆ ವಾಸಿಸಲು ಇಷ್ಟವಿಲ್ಲವೆಂದು ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸಮಾಡಿಕೊಂಡು ಬೆಳಪು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ವೇಳೆ “Aru (silent_killer_010_)” ಎಂಬ ಇನ್‌ಸ್ಟಾಗ್ರಾಂ ಖಾತೆಯ ವ್ಯಕ್ತಿಯೊಂದಿಗೆ ಸಮೀನಾ ಸಂಪರ್ಕದಲ್ಲಿರುವ ವಿಷಯ ಜಹೀರ್ ಅವರಿಗೆ ತಿಳಿದು ಬಂದಿದ್ದು, ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಜಹೀರ್ ಅವರನ್ನು ಮನೆಯಿಂದ ಹೊರಹಾಕಿ ಮಕ್ಕಳನ್ನು ಸಂಪರ್ಕಿಸಲು ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೇ ವಿಚಾರವಾಗಿ ಸಮೀನಾ, ಅವಳ ಸಹೋದರಿ ಆಸ್ಮಾ ಹಾಗೂ “Aru (silent_killer_010_)” ಎಂಬಾತ ಸೇರಿಕೊಂಡು ಜಹೀರ್ ಅವರಿಗೆ ನಿರಂತರ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಅವಮಾನ ಮಾಡುತ್ತಿದ್ದರು ಎನ್ನಲಾಗಿದೆ. ಇದರ ಪರಿಣಾಮವಾಗಿ ದಿನಾಂಕ 16/05/2026ರಂದು ಬೆಳಪು ಗ್ರಾಮದ ಸಮೀನಾ ಅವರ ಮನೆಯ ಮುಂಭಾಗದಲ್ಲಿ ಜಹೀರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕೃತ್ಯಕ್ಕೆ ಆರೋಪಿಗಳು ಪ್ರಚೋದನೆ ಹಾಗೂ ಪ್ರೇರಣೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.