ಉಡುಪಿ: ರಾಜ್ಯ ಸರ್ಕಾರ ರಚಿಸಿರುವ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಕುರಿತು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, “ಎಸ್‌ಎಎಫ್ ವಿಶೇಷ ಕಾರ್ಯಪಡೆ ಯಾಕೆ? ಈ ವಿಶೇಷ ಪೊಲೀಸ್ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆ?” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಅನ್ನು ರಚಿಸಿತ್ತು. ನಕ್ಸಲ್ ನಿಗ್ರಹಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಎಎನ್‌ಎಫ್ (Anti Naxal Force) ಅಗತ್ಯವಿಲ್ಲ ಎಂದು ಹೇಳಿ, ಅದರ ಸಿಬ್ಬಂದಿಯನ್ನು ಕಡಿತಗೊಳಿಸಿ ಎಸ್‌ಎಎಫ್ ರಚಿಸಲಾಗಿತ್ತು.ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಎಸ್‌ಎಎಫ್ ಅನ್ನು ನಿಯೋಜಿಸಲಾಗಿತ್ತು. ಎಸ್‌ಎಎಫ್ ಸ್ಥಾಪನೆಯಾದ ಕೇವಲ 20 ದಿನಗಳಲ್ಲಿ ಚೆನ್ನಯ್ಯನನ್ನು ಬಂಧಿಸಲಾಗಿತ್ತು. “ಬುರುಡೆ ಗ್ಯಾಂಗ್‌ಗೆ ವಿಶೇಷ ರಕ್ಷಣೆ ನೀಡಲು ಎಸ್‌ಎಎಫ್ ಸ್ಥಾಪಿಸಲಾಗಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ವಿಶೇಷ ಕಾರ್ಯಪಡೆಯನ್ನು ಬಿಳಿಯಾನೆಯಂತೆ ನಿರ್ವಹಿಸುವ ಬದಲು ರದ್ದುಪಡಿಸಿ, ಅದರ ಅನುದಾನವನ್ನು ಸರ್ಕಾರದ ಯೋಜನೆಗಳಿಗೆ ಬಳಸಬೇಕು ಎಂದು ಅನುಪಮಾ ಶೆಣೈ ಸರ್ಕಾರವನ್ನು ಆಗ್ರಹಿಸಿದರು.




