ಮುಲ್ಕಿ: “ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿನ ಸೇವೆಗಳ ದರವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ದೇವಸ್ಥಾನದ ಆಡಳಿತ ಮಂಡಳಿ ಪರಿಷ್ಕರಿಸಿದೆ. ಸೇವಾ ದರ ಪರಿಷ್ಕರಣೆಯಲ್ಲಿ ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು’ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಹಾಗೂ ಅನುವಂಶಿಕ ಮೊಕ್ತಸರ ವಾಸುದೇವ ಆಸ್ರಣ್ಣರ ಸಹೋದರ ಹರಿನಾರಾಯಣ ದಾಸ ಆಸ್ರಣ್ಣ ಸ್ಪಷ್ಟನೆ ನೀಡಿದ್ದಾರೆ.
ಕಟೀಲು ದೇವಳದ ಸೇವೆಗಳ ದರ ಪರಿಷ್ಕರಣೆ ರಾಜ್ಯ ಸರಕಾರದ ನಿರ್ದೇಶನದಂತೆ ನಡೆದಿದ್ದು, ದೇವಸ್ಥಾನದ ಹಣವನ್ನು ರಾಜ್ಯ ಸರಕಾರ ‘ಗ್ಯಾರಂಟಿ’ಗಳಿಗೆ ಬಳಸುತ್ತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಾ, ದೇವಸ್ಥಾನ ಮತ್ತು ರಾಜ್ಯ ಸರಕಾರಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸಲಾಗಿದೆ ಎಂಬ ಕುರಿತು ಮಾಧ್ಯಮದೊಂದಿಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
”ದೇವಸ್ಥಾನದ ಸೇವೆಗಳ ದರವನ್ನು ಸ್ಥಳೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರತೀ ಸಲದಂತೆ ಈ ಬಾರಿಯೂ ಪರಿಷ್ಕರಿಸಿದೆ. ಇದರಲ್ಲಿ ಬೇರೆ ಯಾರದೂ ಪಾತ್ರವಿಲ್ಲ. ಹಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ತಳಕು ಹಾಕಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ದೇವಸ್ಥಾನಕ್ಕೆ ಕಾಣಿಕೆ ಹಾಕಿದರೆ ಅದು ಸರಕಾರದ ಖಜಾನೆಗೆ ಸೇರುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ದೇವಸ್ಥಾನದ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಕೇವಲ ಹೂವು ಮತ್ತು ಎಳನೀರು ನೀಡಿದರೆ ಸಾಕು’ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಸಿದ್ದರಾಮಯ್ಯರ ಹೆಸರನ್ನು ಕೆಡಿಸುವ ಹುನ್ನಾರದ ಭಾಗವಾಗಿ ಈ ಅಪಪ್ರಚಾರ ಮಾಡುತ್ತಿರುವಂತೆ ಕಾಣುತ್ತಿದೆ. ಇದೆಲ್ಲ ಸುಳ್ಳು, ಕಟೀಲು ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣ ದೇವಸ್ಥಾನದ ಹೆಸರಿನಲ್ಲೇ ಅದರ ಬ್ಯಾಂಕ್ ಖಾತೆಯಲ್ಲೇ ಇರುತ್ತದೆ. ಅದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಸರಕಾರಕ್ಕೆ ಯಾವುದೇ ಹಣವನ್ನೂ ನೀಡುತ್ತಿಲ್ಲ ಎಂದು ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣದಲ್ಲಿ ದೇವಳದ ಅಗತ್ಯ ಖರ್ಚುವೆಚ್ಚಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಉಳಿಕೆಯಾಗುವ ಮೊತ್ತದ ಶೇ.10 ನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲಾಗುತ್ತದೆ. ದತ್ತಿ ಇಲಾಖೆಯಿಂದ ಆ ಹಣವನ್ನು ದೇವಸ್ಥಾನ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ, ನೌಕರರ ಪಿಂಚಣಿ, ಸಣ್ಣಪುಟ್ಟ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೀಗೆ ಒಟ್ಟಾರೆ ಹಿಂದೂ ಧರ್ಮದ ಅಭಿವೃದ್ಧಿಗೇ ಬಳಸಲಾಗುತ್ತಿದೆ. ಸರಕಾರದ ಬಳಕೆಗಾಗಲಿ, ಬೇರೆ ಧರ್ಮಗಳ ಅಭಿವೃದ್ಧಿಗಾಗಲಿ ಈ ಹಣ ಬಳಕೆಯಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಕಳೆದ ವರ್ಷ 30 ರೂ.ಗೆ ಸಿಗುತ್ತಿದ್ದ ಎಳನೀರಿಗೆ ಈ ವರ್ಷ 60 ರೂ. ಆಗಿದೆ. ಅದೇ ರೀತಿ ಸ್ಥಳೀಯ ಮಾರುಕಟ್ಟೆಯಲ್ಲಿ ಲಭಿಸುವ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಆಧರಿಸಿ ದೇವಳದ ಕೆಲವೊಂದು ಸೇವೆಗಳ ದರವನ್ನು ಪರಿಷ್ಕರಿಸಲಾಗಿದೆ. ಈ ದರ ಪರಿಷ್ಕರಣೆಯಲ್ಲಿ ಸಿದ್ದರಾಮಯ್ಯ ಅಥವಾ ರಾಜ್ಯ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ರೀತಿ ಸುಳ್ಳು ಅಪವಾದ ಹಾಕುವುದು ಸರಿಯಲ್ಲ. ಇಂತಹ ಹೇಳಿಕೆಯಿಂದ ಕಾನೂನಾತ್ಮಕ ತೊಡಕುಗಳು ಎದುರಾದಲ್ಲಿ ಹೇಳಿಕೆ ನೀಡಿರುವ ವ್ಯಕ್ತಿಗಳೇ ಹೊಣೆಗಾರರು ಹೊರತು ದೇವಸ್ಥಾನವಲ್ಲ ಎಂದು ಹರಿನಾರಾಯಣ ದಾಸ ಆಸ್ರಣ್ಣ ಸ್ಪಷ್ಟಪಡಿಸಿದ್ದಾರೆ. “ದೇವಸ್ಥಾನದ ಸೇವಾ ದರಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ಮುಖ್ಯಮಂತ್ರಿಯ ವಿರುದ್ಧ ಅಪಪ್ರಚಾರ ಮಾಡಿರುವ ಬಗ್ಗೆ ನಾವು ಯಾವುದೇ ಪೊಲೀಸ್ ದೂರು ನೀಡಿಲ್ಲ. ಆದರೆ ನಮ್ಮ ಹೇಳಿಕೆಯನ್ನು ಆಧರಿಸಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ.
