ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಹೆಬ್ಬಾವು ಮರಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಜಾಲ ಹೆಣೆಯುತ್ತಿದ್ದ ಒಬ್ಬ ಅಪ್ರಾಪ್ತ ಸೇರಿ ನಾಲ್ವರು ಯುವಕರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಂಗಳೂರಿನ ಬಡಗ ಉಳಿಪಾಡಿ ನಿವಾಸಿ ವಿಶಾಲ್ ಎಚ್. ಶೆಟ್ಟಿ(18), ಅದೇ ಪರಿಸರದ ನಿವಾಸಿ, ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ 16 ವರ್ಷದ ಮುಸ್ಲಿಂ ಹುಡುಗ ಮತ್ತು ಸ್ಟೇಟ್ ಬ್ಯಾಂಕ್ ಬಳಿಯ ಪೆಟ್ ಝೋನ್ ಎಂಬ ಅಂಗಡಿಯ ಮಾಲಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬಂದಿ ಮಹಮ್ಮದ್ ಮುಸ್ತಫ(22) ಎಂದು ತಿಳಿದು ಬಂದಿದೆ.
ಹೆಬ್ಬಾವು ಮಾರಾಟದ ಬಗ್ಗೆ ಮಾಹಿತಿ ಅರಿತ ಮಂಗಳೂರು ಅರಣ್ಯ ವಲಯಾಧಿಕಾರಿ ರಾಜೇಶ್ ಬಳಿಗಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ಸೋಗಿನಲ್ಲಿ ಆರೋಪಿಗಳ ಬಳಿ ಕಳುಹಿಸಿತ್ತು. ನಗರದ ಕದ್ರಿಯ ಅಶ್ವತ್ಥ ಕಟ್ಟೆ ಬಳಿಯಿದ್ದ ಆರೋಪಿ ವಿಶಾಲ್ ಶೆಟ್ಟಿಯನ್ನು ಸಂಪರ್ಕಿಸಿದ ಅರಣ್ಯ ಇಲಾಖೆ ಸಿಬಂದಿ, ಹೆಬ್ಬಾವು ಮರಿ ಕೇಳಿದ್ದಾರೆ. ಹಾವು ತೋರಿಸಿದ ಯುವಕ 45 ಸಾವಿರ ಹಣ ಕೇಳಿದ್ದಾನೆ. ವ್ಯವಹಾರ ಓಕೆ ಆಗುತ್ತಿದ್ದಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.