Home Karkala News ಕಾರ್ಕಳ: ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ : ಸಚಿವ ಈಶ್ವರ...

ಕಾರ್ಕಳ: ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ : ಸಚಿವ ಈಶ್ವರ ಖಂಡ್ರೆ…!!

ಕಾರ್ಕಳ: ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕಟ್ಟಡ, ಆಸ್ಪತ್ರೆ, ಅಂಗನವಾಡಿ ಇತ್ಯಾದಿ ಇದ್ದು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗಿರುವ ತಪ್ಪು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಕಾರ್ಕಳದಲ್ಲಿಂದು ವಲಯ ಅರಣ್ಯಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ನೂತನ ಕಟ್ಟಡ ಉದ್ಘಾಟಿಸಿ, ಅರಣ್ಯ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಡೀಮ್ಡ್ ಅರಣ್ಯ ಸಮಸ್ಯೆ ಪರಿಹರಿಸಲು ಕೊನೆಯ ಅವಕಾಶ ದೊರೆತಿದ್ದು, ಸರ್ವೋನ್ನತ ನ್ಯಾಯಾಲಯಕ್ಕೆ ಮರು ಮನವಿ ಸಲ್ಲಿಸುವ ಸಲುವಾಗಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಮೊದಲಿಗೆ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದಾಗ 9 ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಎಂದು ಗುರುತಿಸಲಾಗಿತ್ತು, ನಂತರ 2022ರಲ್ಲಿ ಪ್ರಮಾಣಪತ್ರ ಸಲ್ಲಿಸಿದಾಗ 3 ಲಕ್ಷ 33 ಸಾವಿರ ಹೆಕ್ಟೇರ್ ಜಮೀನು ಎಂದು ಪರಿಷ್ಕರಿಸಲಾಯಿತು. ಆಗ ಸಮರ್ಪಕವಾಗಿ ಸರ್ವೆ ನಡೆಸದೆ, ಖುದ್ದು ಪರಿಶೀಲಿಸದ ಕಾರಣ ಸರ್ಕಾರಿ ಕಟ್ಟಡ, ಶಾಲೆ, ಆಸ್ಪತ್ರೆ, ಪಟ್ಟಾ ಭೂಮಿ ಸೇರಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದು, ಈ ಲೋಪ ಸರಿಪಡಿಸಬೇಕಾಗಿದೆ ಎಂದರು.

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ದಂಡ ಮತ್ತು ಇತರ ಶುಲ್ಕವನ್ನು ಪಾವತಿಸಬೇಕಾಗಿದೆ. ಪ್ರಸ್ತುತ ಹೈಕೋರ್ಟ್ ಈ ಸಂಬಂಧ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸರ್ಕಾರ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.