Home Latest ವ್ಯಾಪಾರದಲ್ಲಿ ಲಾಭದ ಆಮಿಷ : ₹15.81 ಲಕ್ಷ ವಂಚನೆ ಆರೋಪ…!!

ವ್ಯಾಪಾರದಲ್ಲಿ ಲಾಭದ ಆಮಿಷ : ₹15.81 ಲಕ್ಷ ವಂಚನೆ ಆರೋಪ…!!

ಉಡುಪಿ: ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ₹15.81 ಲಕ್ಷ ವಂಚನೆ ಮಾಡಿರುವ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಫ್ರಾನ್ ಅಜೀಜ್ (50), 76 ಬಡಗುಬೆಟ್ಟು ಗ್ರಾಮ, ಉಡುಪಿ ಇವರ ಅಳಿಯನಾದ 1ನೇ ಆರೋಪಿ ಮೊಹಮ್ಮದ್ ಶರ್ಪದ್ದೀನ್ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದು, 2023ರ ಅಕ್ಟೋಬರ್ ತಿಂಗಳಲ್ಲಿ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ನೀಡಲು  ಮನೆಗೆ ಬಂದಿದ್ದ ವೇಳೆ, ಕತಾರ್‌ನಿಂದ ಖರ್ಜೂರ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಭಾರತಕ್ಕೆ ಆಮದು ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಇಫ್ರಾನ್ ಅಜೀಜ್ ಅವರಿಗೆ ಹೇಳಿದ್ದಾನೆ ಎನ್ನಲಾಗಿದೆ.

ಆ ವೇಳೆ ಹಣಕಾಸಿನ ಸಮಸ್ಯೆ ಇರುವುದಾಗಿ ಇಫ್ರಾನ್ ಅಜೀಜ್ ತಿಳಿಸಿದ್ದರೂ, ಬಳಿಕ ಡಿಸೆಂಬರ್-2024ರಲ್ಲಿ ಕತಾರ್‌ನಿಂದ ಕರೆ ಮಾಡಿದ 1ನೇ ಆರೋಪಿ, ತಾನು ಈಗಾಗಲೇ ಭಾರತಕ್ಕೆ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸಿ ವ್ಯಾಪಾರ ಆರಂಭಿಸಿದ್ದು, ಕೇರಳದ ತ್ರಿಶೂರು ಜಿಲ್ಲೆಯ 2ನೇ ಆರೋಪಿ ಮಹಮ್ಮದ್ ಶಾಹಿದ್ ಹಾಗೂ ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯ 3ನೇ ಆರೋಪಿ ಶಮೀಮ್ ಬಾನು ವ್ಯವಹಾರ ನೋಡಿಕೊಳ್ಳುವ ಪಾಲುದಾರರು ಎಂದು ಪರಿಚಯಿಸಿ ನಂಬಿಸಿದ್ದಾನೆ ಎಂದು ಇಫ್ರಾನ್ ಅಜೀಜ್ ನೀಡಿದ  ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಿರಂತರವಾಗಿ ಒತ್ತಾಯಿಸಿದ್ದ 1ನೇ ಆರೋಪಿ, “ಕತಾರ್‌ಗೆ ಬರುವ ಅಗತ್ಯವಿಲ್ಲ. ನಾನು ಈಗಾಗಲೇ ₹15 ಲಕ್ಷ ಮೌಲ್ಯದ ಖರ್ಜೂರ ಹಾಗೂ ಇತರೆ ವಸ್ತುಗಳನ್ನು ಕಳುಹಿಸಿದ್ದೇನೆ. ನೀವು ಹಣ ಪಾವತಿಸಿದರೆ ಎರಡು ದಿನಗಳಲ್ಲಿ ಉಡುಪಿಗೆ ವಸ್ತುಗಳನ್ನು ಕಳುಹಿಸುತ್ತಾರೆ” ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಆರೋಪಿಯ ಮಾತುಗಳನ್ನು ನಂಬಿದ ಇಫ್ರಾನ್ ಅಜೀಜ್ ದಿನಾಂಕ 13/01/2025 ರಂದು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆಯಿಂದ 3ನೇ ಆರೋಪಿಯ ಇಂಡಿಯನ್ ಬ್ಯಾಂಕ್ ಖಾತೆಗೆ ₹1,44,000 ಹಾಗೂ ದಿನಾಂಕ 15/01/2025 ರಂದು 2ನೇ ಆರೋಪಿಯ ಫೆಡರಲ್ ಬ್ಯಾಂಕ್ ಖಾತೆಗೆ ₹14,37,000 ವರ್ಗಾವಣೆ ಮಾಡಿದ್ದು, ಒಟ್ಟು ₹15,81,000 ಹಣ ಪಾವತಿಸಿದ್ದಾರೆ.

ಆದರೆ ಬಳಿಕ ಆರೋಪಿತರು ಯಾವುದೇ ಖರ್ಜೂರ ಅಥವಾ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸದೇ, ಫೋನ್ ಕರೆ ಮಾಡಿದಾಗ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಮೋಸದ ಉದ್ದೇಶದಿಂದಲೇ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.