ಉಡುಪಿ: ಉದ್ಯೋಗ ಹುಡುಕುತ್ತಿದ್ದ ವೇಳೆ ಯು.ಕೆ ದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್‌ವೈಸರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್.ಆರ್. ಪದ್ಮನಾಭ ಉಪಾಧ್ಯ, ನಿಟ್ಟೂರು, ಉಡುಪಿ ಇವರಿಗೆ 1ನೇ ಆರೋಪಿ ಆಶ್ಲೆ ಕರ್ನೇಲಿಯೋ ಎಂಬಾತ ದಿನಾಂಕ 12/02/2025 ರಂದು ಸಂಪರ್ಕಿಸಿ, ಯು.ಕೆ ದೇಶದಲ್ಲಿ ಉದ್ಯೋಗ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದಾನೆ. ಬಳಿಕ ತನ್ನ ಸಹಾಯಕಿ ಎನ್ನಲಾದ 2ನೇ ಆರೋಪಿ ಸವಿತಾ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾನೆ.
ನಂತರ ಸವಿತಾ ಅವರನ್ನು ಸಂಪರ್ಕಿಸಿದಾಗ, ಯು.ಕೆ ವೀಸಾ ಪ್ರಕ್ರಿಯೆಗಾಗಿ ರೂ.2 ಲಕ್ಷ ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಸೂಚಿಸಿದ್ದು, ಅದರಂತೆ ದಿನಾಂಕ 19/03/2025 ರಂದು ಬ್ಯಾಂಕ್ ಆಫ್ ಬರೋಡ ಖಾತೆಗೆ ರೂ.2 ಲಕ್ಷ ಜಮಾ ಮಾಡಲಾಗಿದೆ ಎನ್ನಲಾಗಿದೆ.
ನಂತರ 3ನೇ ಆರೋಪಿ ಪ್ರಕೃತಿ ಹಾಗೂ 4ನೇ ಆರೋಪಿ ಪ್ರಶಾಂತ್ ಕೂಡ ಸೇರಿಕೊಂಡು ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ. ಆರೋಪಿತರು ಪಿರ್ಯಾದಿದಾರರಿಂದ ಒಟ್ಟು ರೂ.6,23,000 ಹಣದ ಜೊತೆಗೆ ಪಾಸ್‌ಪೋರ್ಟ್ ಕೂಡ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಬಳಿಕ ವೀಸಾ ತಿರಸ್ಕೃತವಾಗಿದೆ ಎಂದು ಹೇಳಿ ಹಣ ಹಾಗೂ ಪಾಸ್‌ಪೋರ್ಟ್ ವಾಪಸು ನೀಡುವುದಾಗಿ ತಿಳಿಸಿದ್ದ ಆರೋಪಿತರು, ನಂತರ ಫೋನ್ ಸಂಪರ್ಕ ಕಡಿತಗೊಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಹಾಗೂ ವಂಚನೆ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.




