Home Latest ಉಡುಪಿ: ಚಂದ್ರದರ್ಶನ : ಮುಸ್ಲಿಂ ಬಾಂಧವರಿಗೆ ನಾಳೆ (ಶುಕ್ರವಾರ) ಈದ್…!!

ಉಡುಪಿ: ಚಂದ್ರದರ್ಶನ : ಮುಸ್ಲಿಂ ಬಾಂಧವರಿಗೆ ನಾಳೆ (ಶುಕ್ರವಾರ) ಈದ್…!!

ನಾಳೆ ಈದುಲ್ ಫಿತ್ರ್(ಶವ್ವಾಲ್ 01)..

ಉಡುಪಿ : ಇಂದು ದಿನಾಂಕ 19-03-2026 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ರವರು ತೀರ್ಮಾನಿಸಿರುತ್ತಾರೆ.

ದಿನಾಂಕ 20-03-2026 ಶುಕ್ರವಾರ ಶವ್ವಾಲ್ 1
(ಈದುಲ್ ಫಿತ್ರ್)

ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ನಾಳೆ ಶುಕ್ರವಾರ ಆಚರಿಸಲಿದ್ದಾರೆ. ರಂಜಾನ್ ತಿಂಗಳು ಮುಕ್ತಾಯಗೊಂಡು ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಈದ್ ಆಚರಿಸಲಾಗುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರ್‌ನ ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ಈದುಲ್ ಫಿತ್ರ್ ಹಬ್ಬದ ಸಂಭ್ರಮ.

ರಂಜಾನ್‌ ತಿಂಗಳ 30 ದಿನಗಳನ್ನು ಉಪವಾಸ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಮುಸ್ಲಿಮರು ಹಬ್ಬ ಆಚರಿಸುವರು. ಹಬ್ಬದ ದಿನ ಬೆಳಿಗ್ಗೆ ಮಸೀದಿ ಅಥವಾ ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಹಬ್ಬದ ದಿನ ಕೇಳಿಬರುವ ‘ಅಲ್ಲಾಹು ಅಕ್ಬರ್’ (ಅಲ್ಲಾಹನು ಶ್ರೇಷ್ಠನು) ಎಂಬ ಅಲ್ಲಾಹನ ನಾಮಸ್ಮರಣೆಯು ದೇವನ ಶ್ರೇಷ್ಠತೆಯನ್ನು, ಮಾನವಕುಲದ ಸಮಾನತೆ ಮತ್ತು ಏಕತೆಯನ್ನು ಪ್ರತಿಪಾದಿಸುತ್ತದೆ.

ಈದ್ ನಮಾಜ್ ಹಬ್ಬದ ಪ್ರಮುಖ ಆಕರ್ಷಣೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವ ಸನ್ನಿವೇಶ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುತ್ತದೆ.