Home Karavali Karnataka ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬ ಆಚರಣೆ…!!

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬ ಆಚರಣೆ…!!

ಮಣಿಪಾಲ: ಮಾಹೆ ವಿವಿಯ ಕುಲಾಧಿಪತಿ ಪದ್ಮವಿಭೂಷಣ ಡಾ| ರಾಮದಾಸ್‌ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು ಬುಧವಾರ ವಿವಿಯ ಮಣಿಪಾಲ ಸಹಿತವಾಗಿ ಮಂಗಳೂರು, ಬೆಂಗಳೂರು, ಜೆಮ್‌ಶೆಡ್‌ಪುರ, ದುಬಾೖ ಕ್ಯಾಂಪಸ್‌ನಲ್ಲಿ ವಿವಿಧ ಸೇವಾ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು.

ಕೆಎಂಸಿ ಡಾ| ಟಿಎಂಎ ಪೈ ಹಾಲ್‌ನಲ್ಲಿ ಯುತ್‌ ಫಾರ್‌ ಸೋಸಿಯಲ್‌ ಚೇಂಜ್‌ ರಾ. ಸಮ್ಮೇಳನ, ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯ ಛಾಯಾಚಿತ್ರ ಪ್ರದರ್ಶನ ಮತ್ತು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ರಕ್ತದಾನ ಮತ್ತು ಅಂಗಾಂಗ ದಾನ ಪ್ರತಿಜ್ಞೆಯ ಮೂರು ದಿನಗಳ ಅಭಿಯಾನವು ಈಗಾಗಲೇ ಅನೇಕರನ್ನು ತಲುಪಿದೆ. ಇಲ್ಲಿಯವರೆಗೆ ಸುಮಾರು 200 ಮಂದಿ ರಕ್ತದಾನ ಮಾಡಿದ್ದು, ಸೆ. 18ರಂದೂ ಈ ಅಭಿಯಾನ ನಡೆಯಲಿದೆ. ಅನೇಕರು ಅಂಗಾಂಗ ದಾನದ ವಾಗ್ಧಾನ ಮಾಡಿದ್ದಾರೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ, ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಂಗಳೂರಿನ ಕಸ್ತೂರ್ಬಾ ಆಸ್ಪತ್ರೆ, ಕೆಎಂಸಿ ಅತ್ತಾವರ ಮತ್ತು ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ, ವೆನ್ಲಾಕ್, ಲೇಡಿಗೋಷನ್‌ ಆಸ್ಪತ್ರೆ ಸಹಿತ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಡಳಿತದ ಸರಕಾರಿ ಆಸ್ಪತ್ರೆಗಳಲ್ಲಿ 20,000 ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

ಸುಮಾರು 1000 ಯಕ್ಷಗಾನ ಕಲಾವಿದರು ಮತ್ತು ಕುಟುಂಬದವರಿಗೆ ಸೇರಿದಂತೆ ಮಣಿಪಾಲ ಆರೋಗ್ಯ ಕಾರ್ಡ್‌ ವಿತರಿಸಲಾಯಿತು. ಸೆ. 18ರಂದು ವಿವಿಧ ಸೇವಾ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಮುಂದುವರಿಯಲಿದೆ. ಸೆ. 20ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ) ಕಾಲೇಜು ಶಿಕ್ಷಕರ 4ನೇ ಸಮಾವೇಶ ನಡೆಯಲಿದೆ.

ಡಾ| ರಾಮದಾಸ್‌ ಪೈ ಅವರ ಹುಟ್ಟುಹಬ್ಬದ ನಿಮಿತ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಶ್ರೀಕೃಷ್ಣ ಪ್ರಸಾದವನ್ನು ಅವರ ಪತ್ನಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಪುತ್ರ ಮಾಹೆ ಟ್ರಸ್ಟ್‌ ಅಧ್ಯಕ್ಷ ರಂಜನ್‌ ಆರ್‌. ಪೈ ಅವರಿಗೆ ಶ್ರೀ ಮಠದ ದಿವಾನರಾದ ನಾಗರಾಜ್‌ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಸ್ತಾಂತರಿಸಿದರು. ಪಣಿಯಾಡಿ ರಾಜೇಶ್‌ ಭಟ್‌ ಉಪಸ್ಥಿತರಿದ್ದರು.