Home Crime ಧರ್ಮಸ್ಥಳ ಪ್ರಕರಣ : ಬಂಗ್ಲೆಗುಡ್ಡೆ ಅರಣ್ಯದಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ ಎಸ್ಐಟಿ…!!

ಧರ್ಮಸ್ಥಳ ಪ್ರಕರಣ : ಬಂಗ್ಲೆಗುಡ್ಡೆ ಅರಣ್ಯದಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ ಎಸ್ಐಟಿ…!!

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ಸ್ನಾನಘಟ್ಟ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಹಲವಾರು ಮೃತದೇಹಗಳ ಅವಶೇಷಗಳಿವೆ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ 12 ಎಕರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲು ಎಸ್ಐಟಿ ಮುಂದಾಗಿದೆ.

ಸಾಕ್ಷಿ ದೂರುದಾರ ಚಿನ್ನಯ್ಯ ಹಾಜರುಪಡಿಸಿದ್ದ ತಲೆಬುರುಡೆ ಇದೇ ಬಂಗ್ಲೆಗುಡ್ಡದಿಂದ ತಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದಕ್ಕೆ ಸಂಬಂಧಿಸಿ ಸ್ಥಳ ಮಹಜರು ನಡೆಸಲು ತೆರಳಿದ ವೇಳೆ ಹಲವಾರು ಮೃತದೇಹಗಳ ಅವಶೇಷಗಳು ಇಲ್ಲಿ ಕಂಡುಬಂದಿರುವುದಾಗಿ ಸೌಜನ್ಯಾಳ ಮಾವ ವಿಠಲ ಗೌಡ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಂಗ್ಲಗುಡ್ಡೆಯ 12 ಎಕರೆ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಇದು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಅರಣ್ಯವಾಗಿರುವುದರಿಂದ ಅರಣ್ಯ ಇಲಾಖೆಯ ಎಲ್ಲ ಅನುಮತಿ ಪಡೆದುಕೊಂಡು ಎಸ್.ಐ.ಟಿ ಇಂದು ಬೆಳಗ್ಗೆ ಬಂಗ್ಲೆಗುಡ್ಡದಲ್ಲಿ ಪರಿಶೀಲನೆಗೆ ತೆರಳಿದೆ.

ಎಸ್.ಐ.ಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಸೈಮನ್ ಹಾಗೂ ಇತರ ಅಧಿಕಾರಿಗಳ ಜೊತೆಗೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧಿಕಾರಿಗಳು,ಎಫ್.ಎಸ್.ಎಲ್ ವಿಭಾಗದ ಸೋಕೊ ತಂಡವು ಕಾರ್ಯಾಚರಣೆಗೆ ಮುಂದಾಗಿದೆ.