ಕಾರ್ಕಳ: ಶಾಂಭವಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದ ಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿ ಸುಮಾರು 40 ಸಾವಿರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 19/05/2026 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ M.S. ಅವರು ಠಾಣೆಯಲ್ಲಿದ್ದ ವೇಳೆ, ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಇಚ್ಚೋಡಿ ಪ್ರದೇಶದಲ್ಲಿ ಕೆಲವರು ಯಾವುದೇ ಪರವಾನಿಗೆ ಪಡೆಯದೇ ಶಾಂಭವಿ ನದಿಯಿಂದ ಹಿಟಾಚಿ, ಜೆಸಿಬಿ ಸೇರಿದಂತೆ ಯಂತ್ರೋಪಕರಣಗಳ ಮೂಲಕ ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಕಳವು ಮಾಡಿದ ಮರಳನ್ನು ನದಿಯ ಮಧ್ಯಭಾಗದಲ್ಲಿ ರಾಶಿ ಹಾಕಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ಮಾಹಿತಿಯ ಮೇರೆಗೆ ಪಿಎಸ್ಐ ಪ್ರಸನ್ನ M.S. ಅವರು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 12:00 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರು ಸಂಘಟಿತರಾಗಿ ಶಾಂಭವಿ ನದಿಯಿಂದ ಕಳವು ಮಾಡಿ ನದಿಯ ಮಧ್ಯಭಾಗದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 5 ಲೋಡ್ (10 ಯುನಿಟ್) ಮರಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳಿನ ಮೌಲ್ಯ ಸುಮಾರು 40,000 ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




