Home Crime ಭೀಕರ ಅಪಘಾತ : ನೀರಿನ ಟ್ಯಾಂಕರ್‌ಗೆ ಸ್ಕೂಟಿ ಡಿಕ್ಕಿ, ಸವಾರ ಸಾವು..!

ಭೀಕರ ಅಪಘಾತ : ನೀರಿನ ಟ್ಯಾಂಕರ್‌ಗೆ ಸ್ಕೂಟಿ ಡಿಕ್ಕಿ, ಸವಾರ ಸಾವು..!

ಪಡುಬಿದ್ರಿ: ಕಾಪು ತಾಲೂಕು ಎಲ್ಲೂರು ಗ್ರಾಮದ ಕಂಚುಗಾರಕೇರಿ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಮೃತಪಟ್ಟ ಘಟನೆ ಬೆಳಿಗ್ಗೆ ಸಂಭವಿಸಿದೆ.

ಪಿರ್ಯಾದುದಾರರಾದ ಸಂತೋಷ ದೇವಾಡಿಗ (40), ಪೆಜತಕಟ್ಟೆ, ಬೆಳಪು ಗ್ರಾಮ ನಿವಾಸಿ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 19/05/2026 ರಂದು ಬೆಳಿಗ್ಗೆ ಸುಮಾರು 7:15 ಗಂಟೆಗೆ ಅವರು ತಮ್ಮ ಮೋಟಾರು ಸೈಕಲ್‌ನಲ್ಲಿ ಸೆಂಟ್ರಿಂಗ್ ಕೆಲಸದ ನಿಮಿತ್ತ ಮನೆಯಿಂದ ಉಚ್ಚಿಲ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸುಮಾರು 7:30 ಗಂಟೆಗೆ ಕಂಚುಗಾರಕೇರಿ ಬಸ್ ನಿಲ್ದಾಣದ ಬಳಿ KA19A-2419 ಸಂಖ್ಯೆಯ ನೀರಿನ ಟ್ಯಾಂಕರ್‌ನ್ನು ಅದರ ಚಾಲಕ ನಟ್ಟೆಕಾಮಿ ಎಂಬಾತ ಉಚ್ಚಿಲ ಕಡೆಯಿಂದ ಅಜಾಗರೂಕ ಹಾಗೂ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಏಕಾಏಕಿ ರಸ್ತೆಯ ಬಲಭಾಗದ ಕಾಂಕ್ರೀಟ್ ರಸ್ತೆಗೆ ತಿರುಗಿಸಿದ್ದಾನೆ ಎನ್ನಲಾಗಿದೆ.

ಈ ಸಂದರ್ಭ ಟ್ಯಾಂಕರ್‌ ಹಿಂಬದಿಯಿಂದ ಎಲ್ಲೂರು ಕಡೆಗೆ KA-20HC-9885 ಸಂಖ್ಯೆಯ ಸ್ಕೂಟಿಯಲ್ಲಿ ಬರುತ್ತಿದ್ದ ಕೃಷ್ಣ ಮೂಲ್ಯ ಅವರು ನಿಯಂತ್ರಣ ತಪ್ಪಿ ಟ್ಯಾಂಕರ್‌ನ ಹಿಂಭಾಗದ ಬಲಬದಿಯ ಚಕ್ರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ ಸ್ಥಳದಲ್ಲಿದ್ದ ಸಂತೋಷ ದೇವಾಡಿಗ ಹಾಗೂ ಸಾರ್ವಜನಿಕರು ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಅವರ ಸಹೋದರರಾದ ನವೀನ್ ಕುಲಾಲ್ ಹಾಗೂ ಪ್ರಶಾಂತ್ ಕುಲಾಲ್ ಅವರೊಂದಿಗೆ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಕೃಷ್ಣ ಮೂಲ್ಯ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.