ಮಂಗಳೂರು: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳ ಮಾಲಕರಿಗೆ ತಲಾ ರೂ. 25,000 ದಂಡ ವಿಧಿಸಿ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
2026ರ ಎ.6ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ ದ್ವಿಚಕ್ರ ವಾಹನವನ್ನು ಹಾಗೂ ಎ.28 ರಂದು ಬಿಸಿ ರೋಡ್ ಬಳಿ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ವಾಹನಗಳ ಮಾಲಕರ ವಿರುದ್ಧ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಕಲಂ:199(ಎ) ಐಎಂಎ ಅಡಿಯಲ್ಲಿ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ವಾಹನದ ಮಾಲಕರಿಗೆ ತಲಾ ರೂ.25,000 ದಂಡ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.




